ಕನ್ವರ್ ಯಾತ್ರೆ | ಕನ್ವರಿಯಾಗಳಿಗೆ ಪರಿಹಾರ ಶಿಬಿರ ನಿರ್ಮಾಣದಿಂದ ಹಿಂದೆ ಸರಿದ ಮುಸ್ಲಿಂ ಎನ್‌ಜಿಒಗಳು

Update: 2024-07-21 17:10 GMT

Photo : PTI

ಮುಝಾಫ್ಫರ್‌ನಗರ್ (ಉತ್ತರ ಪ್ರದೇಶ): ಕನ್ವರ್ ಯಾತ್ರೆಯ ಮಾರ್ಗದಲ್ಲಿನ ಮಳಿಗೆಗಳ ಮಾಲಕರು ತಮ್ಮ ನಾಮಫಲಕಗಳನ್ನು ಪ್ರದರ್ಶಿಸಬೇಕು ಎಂದು ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಸರಕಾರಗಳ ಆದೇಶವು ವಿವಾದದ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಕನ್ವರಿಯಾಗಳಿಗೆ ಏರ್ಪಡಿಸುತ್ತಿದ್ದ ಪರಿಹಾರ ಶಿಬಿರಗಳ ನಿರ್ಮಾಣದಿಂದ ಹಲವಾರು ಸರಕಾರೇತರ ಮುಸ್ಲಿಂ ಸಂಸ್ಥೆಗಳು ಹಿಂದೆ ಸರಿದಿವೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕನ್ವರ್ ಯಾತ್ರೆಯ ಮಾರ್ಗದಲ್ಲಿ ಹಲವಾರು ವರ್ಷಗಳಿಂದ ಪರಿಹಾರ ಶಿಬಿರಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ದೂರದ ಪ್ರದೇಶಗಳಿಂದ ಹಾಗೂ ಹೆದ್ದಾರಿ ಮಾರ್ಗವಾಗಿ ದಣಿದು ಬರುವ ಭಕ್ತಾದಿಗಳಿಗೆ ಈ ಪರಿಹಾರ ಶಿಬಿರಗಳಲ್ಲಿ ಆಹಾರ, ಆಶ್ರಯ, ವೈದ್ಯಕೀಯ ನೆರವು ಹಾಗೂ ಅವರ ಮುಂದಿನ ಪ್ರಯಾಣಕ್ಕೆ ಅನುಕೂಲವಾಗಲು ಕಾಲಿನ ಮಸಾಜ್ ಅನ್ನೂ ಮಾಡಲಾಗುತ್ತಿತ್ತು.

ಆದರೆ, ನಾಮಫಲಕ ಪ್ರದರ್ಶನ ವಿವಾದದ ಸ್ವರೂಪಕ್ಕೆ ತಿರುಗಿರುವುದರಿಂದ, ಪರಿಹಾರ ಶಿಬಿರಗಳನ್ನು ಭಾರವಾದ ಹೃದಯದಿಂದ ರದ್ದುಗೊಳಿಸುತ್ತಿರುವುದಾಗಿ ಪೈಘಮ್-ಇ-ಇನ್ಸಾಯಿತ್ ಸಂಘಟನೆಯ ಅಧ್ಯಕ್ಷ ಆಸಿಫ್ ರಹಿ ಮುಝಾಫ್ಫರ್‌ನಗರ್‌ನಲ್ಲಿ ಪ್ರಕಟಿಸಿದ್ದಾರೆ. ಇದು ಅತ್ಯಂತ ಬೃಹತ್ ಪರಿಹಾರ ಶಿಬಿರವಾಗಿದ್ದು, ಗಂಗಾ-ಜಮುನಾ ಬಾಂಧವ್ಯವನ್ನು ಎತ್ತಿ ಹಿಡಿಯುವುದಕ್ಕಾಗಿ ಕಳೆದ 17 ವರ್ಷಗಳಿಂದ ಮೀನಾಕ್ಷಿ ಚೌಕದಲ್ಲಿ ಖಾಯಂ ಆಗಿ ನಡೆದುಕೊಂಡು ಬರುತ್ತಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ರಹಿ, "ನಾವೇನು ಮಾಡಲು ಸಾಧ್ಯ? ನಮಗೆ ಕೋಮು ಸೌಹಾರ್ದತೆ ಬೇಕಿದೆ. ಆದರೆ, ಅವರಿಗೆ (ಸ್ಥಳೀಯ ಸಂಸ್ಥೆಗಳು) ರಾಜಕಾರಣ ಮಾಡುವುದು ಮಾತ್ರ ಬೇಕಿದೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ವರಿಯಾಗಳಿಗಾಗಿ ಸರಕಾರೇತರ ಸಂಸ್ಥೆ ಸೇವೆಗಳನ್ನು ನಿರ್ವಹಿಸುತ್ತಾ ಬರುತ್ತಿರುವ ಸೆಕ್ಯುಲರ್ ಫ್ರಂಟ್ ಎಂಬ ಸಂಸ್ಥೆಯ ಸಂಸ್ಥಾಪಕ ಗೋಹರ್ ಸಿದ್ದಿಕಿ ಕೂಡಾ ಹೊಸ ಮಾರ್ಗಸೂಚಿಗಳನ್ನು ಮುಂದು ಮಾಡಿ ಈ ವರ್ಷ ಅವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿದ್ದಿಕಿ, "ಕೇವಲ ಮುಸ್ಲಿಮರು ಮಾತ್ರವಲ್ಲ; ಹಿಂದೂಗಳೂ ಸೆಕ್ಯುಲರ್ ಫ್ರಂಟ್ ಸದಸ್ಯರಾಗಿದ್ದಾರೆ. ಕಳೆದ 16 ವರ್ಷಗಳಿಂದ ಕನ್ವರಿಯಾಗಳಿಗೆ ಪುಷ್ಪನಮನ ಹಾಗೂ ಹಣ್ಣುಗಳನ್ನು ನೀಡಿ ನಾವು ಸ್ವಾಗತಿಸುತ್ತಾ ಬರುತ್ತಿದ್ದೇವೆ. ಆದರೆ, ಈ ವರ್ಷ ಸಾಕಷ್ಟು ಅನಗತ್ಯ ನಕಾರಾತ್ಮಕತೆ ಇದೆ. ಕನ್ವರಿಯಾಗಳಿಗೆ ಸೇವೆ ಸಲ್ಲಿಸಲು ಈ ಬಾರಿ ಜಿಲ್ಲಾಡಳಿತದ ಅನುಮತಿ ಪಡೆಯಬೇಕಿದೆ. ಇದು ನಿಜಕ್ಕೂ ವಿಚಿತ್ರವಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವರ್ಷದ ಕನ್ವರ್ ಯಾತ್ರೆಯಲ್ಲಿ ತಮ್ಮ ಆವಾಝ್-ಇ-ಹಕ್ ಸಂಘಟನೆಯು ಭಾಗವಹಿಸುವುದು ಅನಿಶ್ಚಿತ ಎಂದು ಆ ಸಂಘಟನೆಯ ಸಂಸ್ಥಾಪಕ ಶದಾಬ್ ಖಾನ್ ಕೂಡಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News