“ಅಮಿತ್ ಶಾಗೆ ಇತಿಹಾಸ ಗೊತ್ತಿಲ್ಲ, ಅದನ್ನು ಅವರು ಪುನಃ ಬರೆಯುತ್ತಿರುತ್ತಾರೆ”

Update: 2023-12-12 15:23 GMT

ರಾಹುಲ್ ಗಾಂಧಿ | Photo: PTI 

ಹೊಸದಿಲ್ಲಿ: ಕಾಶ್ಮೀರ ಕುರಿತು ತಪ್ಪುಗಳಿಗಾಗಿ ದೇಶದ ಮೊದಲ ಪ್ರಧಾನಿ ಜವಾಹರಲಾಲ ನೆಹರುರನ್ನು ದೂಷಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಮಂಗಳವಾರ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅವರಿಗೆ ಇತಿಹಾಸವನ್ನು ಪುನಃ ಬರೆಯುವ ಚಟವಿದೆ ಎಂದು ಕುಟುಕಿದರು.

‘ಪಂಡಿತ ನೆಹರು ಅವರು ದೇಶಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದರು. ವರ್ಷಗಳ ಕಾಲ ಅವರು ಜೈಲಿನಲ್ಲಿದ್ದರು. ಅಮಿತ್ ಶಾ ಅವರಿಗೆ ಇತಿಹಾಸ ಗೊತ್ತಿಲ್ಲ. ಅವರು ಇತಿಹಾಸವನ್ನು ತಿಳಿದುಕೊಳ್ಳುತ್ತಾರೆ ಎಂದೂ ನಾನು ನಿರೀಕ್ಷಿಸುವುದಿಲ್ಲ. ಅವರಿಗೆ ಇತಿಹಾಸವನ್ನು ಮರಳಿ ಬರೆಯುವ ಚಟವಿದೆ’ ಎಂದು ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಹೇಳಿದರು.

ಇದು ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಒಂದು ಮಾರ್ಗವಾಗಿದೆ, ಅಷ್ಟೇ ಎಂದರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದ ಕೇಂದ್ರದ ನಿರ್ಧಾರವನ್ನು ಸೋಮವಾರ ಸರ್ವೋಚ್ಚ ನ್ಯಾಯಾಲಯವು ಎತ್ತಿ ಹಿಡಿದ ಬಳಿಕ ಶಾ ನೆಹರು ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.

ಸಂಸತ್ತಿನಲ್ಲಿ ಮಾತನಾಡಿದ ಶಾ, ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಕದನ ವಿರಾಮವನ್ನು ಘೋಷಿಸಿದ್ದ ಮತ್ತು ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ಯಿದ್ದ; ಈ ಎರಡು ಪ್ರಮುಖ ತಪ್ಪುಗಳಿಗಾಗಿ ನೆಹರುರನ್ನು ದೂಷಿಸಿದ್ದರು.

‘ಪಾಕಿಸ್ತಾನದ ಜೊತೆ ಯುದ್ಧದ ಸಮಯದಲ್ಲಿ ಅಕಾಲಿಕ ಕದನವಿರಾಮವನ್ನು ಘೋಷಿಸಿರದಿದ್ದರೆ ಇಂದು ಪಾಕ್ ಆಕ್ರಮಿತ ಕಾಶ್ಮೀರವು ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ. ಅವರು (ನೆಹರು) ಎರಡು ದಿನಗಳ ಕಾಲ ಕಾದಿದ್ದರೆ ನಮ್ಮ ದೇಶವು ಗೆದ್ದಿರುತ್ತಿತ್ತು, ಇಡೀ ಕಾಶ್ಮೀರವೇ ನಮ್ಮದಾಗಿರುತ್ತಿತ್ತು ’ ಎಂದು ಹೇಳಿದ್ದ ಶಾ, ನೆಹರು ಇಲ್ಲದಿದ್ದರೆ ಕಾಶ್ಮೀರವೇ ಇರುತ್ತಿರಲಿಲ್ಲ ಎಂದು ಜನರು ಹೇಳುತ್ತಾರೆ. ಹೈದರಾಬಾದ್ ದೊಡ್ಡ ಸಮಸ್ಯೆಯನ್ನು ಎದುರಿಸಿದ್ದಾಗ ನೆಹರು ಅಲ್ಲಿಗೆ ಹೋಗಿದ್ದರೇ ಎಂದು ಇತಿಹಾಸವನ್ನು ತಿಳಿದಿರುವ ಜನರಿಗೆ ನಾನು ಕೇಳಬಯಸುತ್ತೇನೆ. ಲಕ್ಷದ್ವೀಪ, ಜುನಾಗಡ ಅಥವಾ ಜೋಧಪುರಕ್ಕೆ ನೆಹರು ಹೋಗಿದ್ದರೇ? ಅವರು ಕಾಶ್ಮೀರಕ್ಕೆ ಮಾತ್ರ ಹೋಗುತ್ತಿದ್ದರು ಮತ್ತು ಅಲ್ಲಿಯೂ ಕೆಲಸವನ್ನು ಪೂರ್ಣಗೊಳಿಸದೆ ಬಿಟ್ಟಿದ್ದರು ಎಂದು ಟೀಕಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News