ಪಂಜಾಬ್ ಸರಕಾರ ಉರುಳಿಸುವುದಾಗಿ ಅಮಿತ್ ಶಾ ಬೆದರಿಕೆ ಒಡ್ಡಿದ್ದಾರೆ: ಕೇಜ್ರಿವಾಲ್ ಆರೋಪ

Update: 2024-05-27 14:17 GMT

ಅಮಿತ್ ಶಾ , ಅರವಿಂದ ಕೇಜ್ರಿವಾಲ್ | PTI 

ಚಂಡಿಗಢ: ಲೋಕಸಭೆ ಚುನಾವಣೆಯ ಬಳಿಕ ಪಂಜಾಬ್‌ ನಲ್ಲಿರುವ ಭಗವಂತ್ ಮಾನ್ ಅವರ ಸರಕಾರವನ್ನು ಉರುಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆದರಿಕೆ ಒಡ್ಡಿದ್ದಾರೆ. ಇದು ಸರ್ವಾಧಿಕಾರ ಎಂದು ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಆರೋಪಿಸಿದ್ದಾರೆ.

ಲುಧಿಯಾನದಲ್ಲಿ ರವಿವಾರ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ್ದ ಅಮಿತ್ ಶಾ, ಪಂಜಾಬ್‌ ನಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಖಾತರಿ ನೀಡುವಂತೆ ಜನರಲ್ಲಿ ಮನವಿ ಮಾಡಿದ್ದರು. ಅಲ್ಲದೆ, ಬಿಜೆಪಿ ಜಯ ಗಳಿಸಿದ ಬಳಿಕ ಮಾನ್ ಸರಕಾರ ಹೆಚ್ಚು ಕಾಲ ಉಳಿಯಲಾರದು ಎಂದು ಹೇಳಿದ್ದರು.

ಅಮೃತಸರದಲ್ಲಿ ಸೋಮವಾರ ವ್ಯಾಪಾರಿಗಳನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ನೀವು ಅಮಿತ್ ಶಾ ಅವರ ಹೇಳಿಕೆಯನ್ನು ಕೇಳಿದ್ದೀರಾ ? ಅವರು ಪಂಜಾಬಿಗಳನ್ನು ಸಾಕಷ್ಟು ನಿಂದಿಸಿದ್ದಾರೆ. ಜೂನ್ 4ರ ನಂತರ ಪಂಜಾಬ್ ಸರಕಾರವನ್ನು ಉರುಳಿಸುವುದಾಗಿ ಅವರು ಬೆದರಿಕೆ ಒಡ್ಡಿದ್ದಾರೆ. ಜೂನ್ 4ರ ನಂತರ ಭಗವಂತ್ ಮಾನ್ ಅವರ ಮುಖ್ಯಮಂತ್ರಿಯಾಗಿ ಇರುವುದಿಲ್ಲ ಎಂದು ಹೇಳಿದ್ದಾರೆ ಎಂದರು.

ನಮಗೆ 99 ಸ್ಥಾನ (ಶಾಸಕ)ಗಳು ಇವೆ. ನೀವು ಹೇಗೆ ಸರಕಾರವನ್ನು ಉರುಳಿಸುತ್ತೀರಿ? ದೇಶದಲ್ಲಿ ಸರ್ವಾಧಿಕಾರ ಅಸ್ತಿತ್ವದಲ್ಲಿದೆ ಎಂದು ಕೇಜ್ರಿವಾಲ್ ಹೇಳಿದರು. ಸಿಬಿಐ, ಈಡಿ ಮೂಲಕ ಶಾಸಕರಿಗೆ ಬೆದರಿಕೆ ಒಡ್ಡುವುದಾಗಿ ಹಾಗೂ ಅವರನ್ನು ಖರೀದಿಸುವುದಾಗಿ ಬಿಜೆಪಿ ನಾಯಕರು ಬಹಿರಂಗವಾಗಿ ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನಾನು (ಅಮಿತ್ ಶಾ) ಅವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ಪಂಜಾಬ್‌ ನ ಜನರ ಕ್ಷಮೆ ಕೇಳಿ. ಇಲ್ಲದೇ ಇದ್ದರೆ, ಅವರು ನಿಮ್ಮನ್ನು ಪಂಜಾಬಿಗೆ ಪ್ರವೇಶಿಸಲು ಅವಕಾಶ ನೀಡಲಾರರು ಎಂದು ಕೇಜ್ರಿವಾಲ್ ಅವರು ವ್ಯಂಗ್ಯವಾಗಿ ಹೇಳಿದರು.

ಅಮಿತ್ ಶಾ ಅವರ ಹೇಳಿಕೆ ಕುರಿತಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶಾ ಅವರನ್ನು ತರಾಟೆಗೆ ತೆಗೆದುಕೊಂಡರು. ನಿಮಗೆ ಸರಕಾರವನ್ನು ಉರುಳಿಸುವ ಧೈರ್ಯ ಇದೆಯೇ? ನಮಗೆ 92 ಸ್ಥಾನಗಳು ಇವೆ. ಅವರು ನಮಗೆ ಬೆದರಿಗೆ ಒಡ್ಡುತ್ತಿದ್ದಾರೆ. ನೀವು ಮತ ಯಾಚಿಸಲು ಇಲ್ಲಿಗೆ ಬರುತ್ತಿದ್ದೀರಾ? ಅಥವಾ ಸರಕಾರವನ್ನು ಉರುಳಿಸುವ ಬೆದರಿಕೆ ಒಡ್ಡಲು ಬರುತ್ತಿದ್ದೀರಾ? ಎಂದು ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News