ಬೇಡಿಕೆಯಿಟ್ಟ ಮೊತ್ತಕ್ಕಿಂತ ಕಡಿಮೆ ಬರ ಪರಿಹಾರ ಕೇಂದ್ರ ಬಿಡುಗಡೆಗೊಳಿಸಿದೆ: ಸುಪ್ರೀಂ ಕೋರ್ಟಿಗೆ ಹೇಳಿದ ಕರ್ನಾಟಕ ಸರ್ಕಾರ
ಹೊಸದಿಲ್ಲಿ: ರಾಜ್ಯಕ್ಕೆ ರೂ. 3,454 ಕೋಟಿ ಬರ ಪರಿಹಾರ ಬಿಡುಗಡೆಗೊಳಿಸುವ ಕೇಂದ್ರದ ನಿರ್ಧಾರದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಉಲ್ಲೇಖಿಸಿದ ಕರ್ನಾಟಕ ಸರ್ಕಾರ, ರಾಜ್ಯವು ಬೇಡಿಕೆಯಿಟ್ಟ ಮೊತ್ತಕ್ಕಿಂತ ಬಹಳಷ್ಟು ಕಡಿಮೆ ಮೊತ್ತವನ್ನು ನೀಡಲು ಕೇಂದ್ರ ತೀರ್ಮಾನಿಸಿದೆ ಎಂದು ಹೇಳಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ವಕೀಲರಾದ ಕಪಿಲ್ ಸಿಬಲ್ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠದ ಮುಂದೆ ಹೇಳಿದರಲ್ಲದೆ ಈ ವಿಚಾರದಲ್ಲಿ ಅಂತರ-ಸಚಿವಾಲಯ ಸಮಿತಿ ವರದಿಯನ್ನು ನ್ಯಾಯಾಲಯದ ಮುಂದಿಡಲು ಕೇಂದ್ರಕ್ಕೆ ಸೂಚಿಸಬೇಕೆಂದು ಕೋರಿದರು.
ಈ ವರದಿಯನ್ನು ತನ್ನ ಮುಂದೆ ಹಾಜರುಪಡಿಸಲು ನ್ಯಾಯಾಲಯ ಸೂಚಿಸಿದೆ. ಈ ವರದಿ ಹಾಗೂ ಟಿಪ್ಪಣಿಯನ್ನು ಪ್ರಸ್ತುತಪಡಿಸಲು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಸಮಯಾವಕಾಶ ಕೋರಿದರು. ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ನಿಗದಿಪಡಿಸಲಾಗಿದೆ.
ಕರ್ನಾಟಕದ ಅರ್ಧದಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆದ ದಿನವಾದ ಎಪ್ರಿಲ್ 26ರಂದು ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿಯಲ್ಲಿ ರಾಜ್ಯಕ್ಕೆ ರೂ. 3,454 ಕೋಟಿ ಬಿಡುಗಡೆಗೊಳಿಸಿತ್ತು.
ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್ ಅಡಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ರೂ 18,174 ಕೋಟಿ ಬರಪರಿಹಾರ ಕೋರಿತ್ತು. ಇದೇ ತಿಂಗಳಿನಲ್ಲಿ ರಾಜ್ಯವು ತನ್ನ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು.