ಪ್ರಭಾವಿ ದಲಿತ ಮುಖಂಡ ಅಥವಾ ಹಿಂದುಳಿದ ವರ್ಗದ ಮಹಿಳೆಗೆ ಬಿಜೆಪಿ ಅಧ್ಯಕ್ಷ ಸ್ಥಾನ?
ಹೊಸದಿಲ್ಲಿ: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ವಿಸ್ತರಿತ ಅಧಿಕಾರಾವಧಿ ಈ ತಿಂಗಳ ಕೊನೆಗೆ ಮುಗಿಯಲಿದ್ದು, ಕೇಂದ್ರದಲ್ಲಿ ಆಡಳಿತಾರೂಢ ಪಕ್ಷದ ಚುಕ್ಕಾಣಿ ಹಿಡಿಯುವ ಅದೃಷ್ಟ ಯಾರ ಪಾಲಿಗೆ ಒದಗಿ ಬರುತ್ತದೆ ಎಂಬ ಕುತೂಹಲ ಪಕ್ಷದ ವಲಯದಲ್ಲಿ ಸಹಜವಾಗಿಯೇ ಮೂಡಿದೆ. ಲೋಕಸಭಾ ಚುನಾವಣೆಯಲ್ಲಿ ನಿರಾಶಾದಾಯಕ ಪ್ರದರ್ಶನ ಕಂಡ ಮಹಾರಾಷ್ಟ್ರ ಹಾಗೂ ಹರ್ಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳನ್ನೂ ಎದುರಿಸಬೇಕಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ಹೊಸಮುಖವನ್ನು ಹುಡುಕಬೇಕಾದ ಅನಿವಾರ್ಯತೆ ಎದುರಾಗಿದೆ.
ಮೋದಿ ಸಂಪುಟದಲ್ಲಿ ಜೆ.ಪಿ.ನಡ್ಡಾ ಸಚಿವರಾಗಿ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಉತ್ತರಾಧಿಕಾರಿಯ ಆಯ್ಕೆ ಪ್ರಕ್ರಿಯೆ ಮುಂದಿನ ಕೆಲ ದಿನಗಳಲ್ಲಿ ಆರಂಭಾಗಲಿದೆ. ಸಂಘಟನೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿದವರನ್ನು ಪಕ್ಷದ ಅತ್ಯುನ್ನತ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆಯ ಜತೆಗೆ, ತಳಮಟ್ಟದ ದಲಿತ ಮಹಿಳೆಯೊಬ್ಬರನ್ನು ಇಲ್ಲವೇ ಆರೆಸ್ಸೆಸ್ ಹಿನ್ನೆಲೆಯ ಹಿಂದುಳಿದ ವರ್ಗದ ಮುಖಂಡರೊಬ್ಬರನ್ನು ಈ ಹುದ್ದೆಗೆ ಆಯ್ಕೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಏತನ್ಮಧ್ಯೆ, ಆರೆಸ್ಸೆಸ್ ಬೆಂಬಲವಿಲ್ಲದೆಯೇ ಸಾಧನೆ ಮಾಡುವ ಮಟ್ಟಕ್ಕೆ ಬಿಜೆಪಿ ಪ್ರಭಾವಿಯಾಗಿ ಬೆಳೆದಿದೆ ಎಂದು ನಡ್ಡಾ ನೀಡಿರುವ ಹೇಳಿಕೆ ಆರೆಸ್ಸೆಸ್ ಮುಖಂಡರನ್ನು ಕೆರಳಿಸಿದೆ. ನಡ್ಡಾ ಅವರ ಅಧಿಕಾರಾವಧಿ ಜನವರಿಯಲ್ಲಿ ಮುಕ್ತಾಯವಾಗಿದ್ದರೂ, ಲೋಕಸಭೆ ಚುನಾವಣೆ ಕಾರಣದಿಂದ ಆರು ತಿಂಗಳು ವಿಸ್ತರಿಸಲಾಗಿತ್ತು. 2029ರ ಲೋಕಸಭಾ ಚುನಾವಣೆಗೆ ಮುನ್ನ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬರುವ ಸಾಧ್ಯತೆ ಇರುವುದರಿಂದ ಮಹಿಳೆಯೊಬ್ಬರನ್ನು ಪಕ್ಷದ ಅತ್ಯುನ್ನತ ಹುದ್ದೆಗೆ ತರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.