12 ನಿಮಿಷಗಳ ಹಾರಾಟವನ್ನು ಯಶಸ್ವಿಯಾಗಿ ಮುಗಿಸಿದ ಪೈಲಟ್ ರಹಿತ ವಿಮಾನ
ಕ್ಯಾಲಿಫೋರ್ನಿಯಾ: ಸೆಸ್ನಾ 208ಬಿ ಕ್ಯಾರವಾನ್ ವಿಮಾನವು ಯಾವುದೇ ಪ್ರಯಾಣಿಕನಿಲ್ಲದೆ ಹನ್ನೆರಡು ನಿಮಿಷಗಳ ಕಾಲ ಯಶಸ್ವಿ ಟೇಕಾಫ್, ಹಾರಾಟ ಹಾಗೂ ಭೂಸ್ಪರ್ಶ ಮಾಡಿದೆ. ಈ ಐತಿಹಾಸಿಕ ವೈಮಾನಿಕ ಸಾಧನೆಯು ನವೆಂಬರ್ 21ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಬೆನಿಟೊ ಕೌಂಟಿಯಲ್ಲಿನ ಹೊಲಿಸ್ಟರ್ ಮುನಿಸಿಪಲ್ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ndtv.com ವರದಿ ಮಾಡಿದೆ.
ಈ ಕುರಿತು Forbes ನಿಯತಕಾಲಿಕಕ್ಕೆ ಸಂದರ್ಶನ ನೀಡಿರುವ ರಿಲಯಬಲ್ ರೊಬೊಟಿಕ್ಸ್ ಸಹ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಬರ್ಟ್ ಬೋಸ್, "ವೈಮಾನಿಕ ಉದ್ಯಮದ ಈ ಮೊಟ್ಟ ಮೊದಲ ವಿಮಾನದ ಪ್ರಾಯೋಗಿಕ ಹಾರಾಟವು ದೂರನಿಯಂತ್ರಿತ ಕಾರ್ಯಾಚರಣೆಯ ವಿಶ್ವದ ಅತ್ಯಂತ ಜನಪ್ರಿಯ ಸರಕು ಸಾಗಣೆ ವಿಮಾನದ್ದಾಗಿದೆ. ಈ ತಂತ್ರಜ್ಞಾನವು ಕೆಲಸ ಮಾಡುತ್ತದೆ ಮತ್ತು ಕೈಯಳತೆಯಲ್ಲಿದೆ ಎಂಬುದನ್ನು ಈ ಹಾರಾಟವು ಎತ್ತಿ ತೋರಿಸಿದೆ" ಎಂದು ಹೇಳಿದ್ದಾರೆ.
ಇದರೊಂದಿಗೆ, 2021ರಿಂದ ರಿಲಯಬಲ್ ರೊಬೊಟಿಕಕ್ಸ್ ಸಂಸ್ಥೆಯು ದೂರ ನಿಯಂತ್ರಿತ ಪೈಲಟ್ ಕಾರ್ಯಾಚರಣೆ ತಂತ್ರಜ್ಞಾನದಲ್ಲಿ ಅಮೆರಿಕಾ ವಾಯುಪಡೆಯೊಂದಿಗೆ ಸಹಭಾಗಿತ್ವ ಹೊಂದಿದ್ದು, ಕಾರ್ಗೊವಿಶನ್ ಫೋರಮ್ ಆಫ್ ಎಎಸ್‌ಎಲ್ ಏವಿಯೇಷನ್ ಹೋಲ್ಡಿಂಗ್ಸ್‌ನಲ್ಲಿ ಸದಸ್ಯತ್ವವನ್ನು ಹೊಂದಿದೆ. ಈ ಸಂಸ್ಥೆಯು ಆವಿಷ್ಕಾರಕ ವೈಮಾನಿಕ ತಂತ್ರಜ್ಞಾನಗಳನ್ನು ಶೋಧಿಸುವುದಕ್ಕೆ ಮುಡಿಪಾಗಿರುವ ಜಾಗತಿಕ ವೈಮಾನಿಕ ಸೇವೆಗಳ ಸಂಸ್ಥೆಯಾಗಿದೆ.
ಈ ವಿಮಾನ ಹಾರಾಟದ ವಿಡಿಯೊವು ಕಾಕ್‌ಪಿಟ್‌ನೊಳಗಿನಿಂದ 360 ಡಿಗ್ರಿ ಕೋನದ ಅನುಭವವನ್ನು ನೀಡುತ್ತದೆ.