ಅಣ್ಣಾ ವಿ.ವಿ. ಲೈಂಗಿಕ ದೌರ್ಜನ್ಯ ಪ್ರಕರಣ ; ಮಹಿಳೆಯರೇ ಇರುವ SIT ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶ
ಚೆನ್ನೈ :ಅಣ್ಣಾ ವಿಶ್ವವಿದ್ಯಾನಿಲಯದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗೆ ಮಹಿಳಾ ಐಪಿಎಸ್ ಅಧಿಕಾರಿಗಳನ್ನೇ ಒಳಗೊಂಡ ವಿಶೇಷ ತನಿಖಾ ತಂಡವನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಶನಿವಾರ ರೂಪಿಸಿದೆ.
ಎಫ್‌ಐಆರ್ ಸೋರಿಕೆಯಿಂದ ಆಘಾತಕ್ಕೆ ಒಳಗಾದ ಸಂತ್ರಸ್ತೆಗೆ 25 ಲಕ್ಷ ರೂ. ಪರಿಹಾರ ನೀಡುವಂತೆ ಕೂಡ ನ್ಯಾಯಮೂರ್ತಿಗಳಾದ ಎಸ್.ಎಂ ಸುಬ್ರಹ್ಮಣೀಯನ್ ಹಾಗೂ ವಿ. ಲಕ್ಷ್ಮೀನಾರಾಯಣನ್ ಅವರನ್ನು ಒಳಗೊಂಡ ರಜಾಕಾಲದ ಪೀಠ ಆದೇಶಿಸಿದೆ.
ಸಂತ್ರಸ್ತೆಗೆ ಉಚಿತ ಶಿಕ್ಷಣ ಹಾಗೂ ವಾಸ್ತವ್ಯ ಒದಗಿಸುವಂತೆ, ಆಕೆ ತನ್ನ ಶಿಕ್ಷಣ ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ವಿಶ್ವವಿದ್ಯಾನಿಲಯಕ್ಕೆ ಪೀಠ ನಿರ್ದೇಶಿಸಿದೆ.
‘‘ಅಗತ್ಯವಾದರೆ, ಪತ್ರಿಕಾಗೋಷ್ಠಿ ನಡೆಸಿ ತನಿಖೆಯ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಿರುವುದಕ್ಕಾಗಿ ಚೆನ್ನೈ ಪೊಲೀಸ್ ಆಯುಕ್ತರ ವಿರುದ್ಧ ತಮಿಳುನಾಡು ಸರಕಾರ ಕ್ರಮ ಆರಂಭಿಸಬಹುದು’’ ಎಂದು ಪೀಠ ತಿಳಿಸಿದೆ.
ನಗರ ಪೊಲೀಸರು ಪಕ್ಷಪಾತದ ತನಿಖೆ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳಾ ನ್ಯಾಯವಾದಿಯೊಬ್ಬರು ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸಂದರ್ಭ ನ್ಯಾಯಾಲಯ ಈ ಆದೇಶ ನೀಡಿದೆ. ವಿಶೇಷ ತನಿಖಾ ತಂಡ ಐಪಿಎಸ್ ಅಧಿಕಾರಿಗಳಾದ ಸ್ನೇಹ ಪ್ರಿಯಾ, ಅಯ್ಮಾನ್ ಜಮಾಲ್ ಹಾಗೂ ಬೃಂದಾ ಅವರನ್ನು ಒಳಗೊಂಡಿದೆ.
ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ನಿರ್ವಹಿಸುವ ಎಫ್‌ಐಆರ್ ಅಪ್‌ಲೋಡ್ ಮಾಡುವ ಪೋರ್ಟಲ್‌ನ ದೋಷದಿಂದ ಎಫ್‌ಐಆರ್ ಸೋರಿಕೆಯಾಗಿದೆ ಎಂದು ಇದಕ್ಕಿಂತ ಮೊದಲು ನ್ಯಾಯವಾದಿ ಪಿ.ಎಸ್. ರಾಮನ್ ಪ್ರತಿಪಾದಿಸಿದ್ದರು. ಐಪಿಎಸ್‌ನಿಂದ ಬಿಎನ್‌ಎಸ್‌ಗೆ ವರ್ಗಾವಣೆಯಾಗುವ ಸಂದರ್ಭ ಈ ದೋಷಗಳು ಸಂಭವಿಸಿರಬಹುದು ಎಂದು ಎನ್‌ಐಸಿಯ ಅಧಿಕಾರಿಗಳು ನಮಗೆ (ತಮಿಳುನಾಡು ಪೊಲೀಸರು) ಮಾಹಿತಿ ನೀಡಿದ್ದರು. ಎಫ್‌ಐಆರ್ ಅಪ್‌ಲೋಡ್ ಆದ ಬಳಿಕೆ ಕೆಲವೇ ಸೆಕೆಂಡ್‌ಗಳಲ್ಲಿ ತಡೆ ಹಿಡಿಯಲಾಗಿದೆ. ಆದರೆ, ಆ ಸಮಯದ ಒಳಗೆ ಎಫ್‌ಐಆರ್ 14 ಮಂದಿಗೆ ಲಭ್ಯವಾಗಿದೆ. ನಾವು ಅವರ ಐಪಿ ವಿಳಾಸದ ಮೂಲಕ ಪತ್ತೆ ಹಚ್ಚುತ್ತಿದ್ದೇವೆ ಎಂದು ಅವರು ತಿಳಿಸಿದರು.
ಇದಕ್ಕೆ ಪೀಠ, ಇದರಲ್ಲಿ ಏನೂ ಹುರುಳಿಲ್ಲ. ವರ್ಗಾವಣೆ ಜುಲೈಯಲ್ಲಿ ನಡೆದಿದೆ. ಈಗ ನಾವು ಡಿಸೆಂಬರ್‌ಗೆ ಬಂದಿದ್ದೇವೆ ಎಂದಿತು.