1984ರ ಭೋಪಾಲ್ ದುರಂತದ ವಿಷಕಾರಿ ಅವಶೇಷ ಇಂದು ಸಾಗಾಣಿಕೆ
ಇಂಧೋರ್: ಭೋಪಾಲ್ ವಿಷಾನಿಲ ದುರಂತದ ವಿಷಕಾರಿ ಅವಶೇಷಗಳನ್ನು ಟ್ರಕ್ ಗಳಲ್ಲಿ ಸಾಗಿಸುವ ಕಾರ್ಯ ಭಾನುವಾರ ಮುಂಜಾನೆ ಆರಂಭವಾಗಿದೆ.
1984ರ ದುರಂತದ ಸುಮಾರು 337 ಟನ್ ವಿಷಕಾರಿ ತ್ಯಾಜ್ಯಗಳನ್ನು 225 ಕಿಲೋಮೀಟರ್ ದೂರ ಒಯ್ದು ಪಿತಾಂಪುರಕ್ಕೆ ಸಾಗಿಸಿ ಹೊಗೆ ಮತ್ತು ಬೂದಿಯಾಗಿ ದಹಿಸಲಾಗುತ್ತದೆ. ಭೋಪಾಲ್ ದುರಂತದ ಪರಿಹಾರ ಮತ್ತು ಪುನರ್ವಸತಿ ನಿರ್ದೇಶಕ ಸ್ವತಂತ್ರ ಕುಮಾರ್ ಸಿಂಗ್ ಈಗಾಗಲೇ ಇಂಧೋರ್, ಭೋಪಾಲ್ ಮತ್ತು ಧರ್ ನ ಹಿರಿಯ ಅಧಿಕಾರಿಗಳಿಗೆ ಈ ಸಂಬಂಧ ಪತ್ರ ಬರೆದು ಸಿದ್ಧತೆಗಾಗಿ ಕೋರಿದ್ದಾರೆ. ಹತ್ತಾರು ಜಿಪಿಎಸ್ ಸಶಕ್ತ ಟ್ರಕ್ ಗಳು ತ್ಯಾಜ್ಯಗಳನ್ನು ಸಾಗಿಸಲು ಸಜ್ಜಾಗಿವೆ.
ಡಿಸೆಂಬರ್ 3ರಂದು ಮಧ್ಯಪ್ರದೇಶ ಹೈಕೋರ್ಟ್ ಈ ಅಪಾಯಕಾರಿ ತ್ಯಾಜ್ಯಗಳನ್ನು ನಾಲ್ಕು ವಾರಗಳ ಒಳಗಾಗಿ ವಿಲೇವಾರಿ ಮಾಡುವಂತೆ ಸೂಚನೆ ನೀಡಿತ್ತು. ಈಗ ಮುಚ್ಚಿರುವ ಯೂನಿಯನ್ ಕಾರ್ಬೈಡ್ ಫ್ಯಾಕ್ಟರಿಯಲ್ಲಿ ಈ ಅಪಾಯಕಾರಿ ತ್ಯಾಜ್ಯಗಳನ್ನು ಇದುವರೆಗೆ ಸಂಗ್ರಹಿಸಿ ಇಡಲಾಗಿತ್ತು. "ನೀವು ಇನ್ನೊಂದು ದುರಂತಕ್ಕೆ ಕಾಯುತ್ತಿದ್ದೀರಾ" ಎಂದು ವಿಳಂಬಕ್ಕಾಗಿ ಹೈಕೋರ್ಟ್ ತೀವ್ರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು.
ಯೂನಿಯನ್ ಕಾರ್ಬೈಡ್ ತ್ಯಾಜ್ಯಗಳನ್ನು ಎರಡು ಹಂತಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ. ಒಂದು ದಹಿಸುವುದು ಮತ್ತು ಇನ್ನೊಂದು ಹೊಂಡಗಳಲ್ಲಿ ಮುಚ್ಚುವುದು. ಟ್ರಕ್ ಗಳಲ್ಲಿ ಸಾಗಿಸುವ ತ್ಯಾಜ್ಯವನ್ನು ಪಿತಾಂಪುರದ ತಾರಾಪುರ ಗ್ರಾಮದ ಪಕ್ಕ ಇರುವ ಪಿತಾಂಪುರ ಇಂಡಸ್ಟ್ರಿಯಲ್ ವೇಸ್ಟ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ತಲುಪಿದ ಬಳಿಕ, 35.6 ಟನ್ ತ್ಯಾಜ್ಯದ ಪರೀಕ್ಷಾರ್ಥ ದಹಿಸುವಿಕೆ ನಡೆಯಲಿದೆ. ಇದರಲ್ಲಿ ಈ ತಾಜ್ಯಗಳನ್ನು ಹೇಗೆ ಸುರಕ್ಷಿತವಾಗಿ ದಹಿಸಲು ಎಷ್ಟು ಸಮಯಾವಕಾಶ ಬೇಕಾಗುತ್ತದೆ ಎಂದು ತಿಳಿದುಕೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ. ಗಂಟೆಗೆ 135 ಕೆಜಿ, ಗಂಟೆಗೆ 80 ಕೆಜಿ ಹಾಗೂ ಗಂಟೆಗೆ 270 ಕೆಜಿ ತ್ಯಾಜ್ಯವನ್ನು ಪರೀಕ್ಷಾರ್ಥವಾಗಿ ದಹಿಸಲಾಗುತ್ತದೆ. ಯಾವುದು ಒಳ್ಳೆಯ ಆಯ್ಕೆ ಎಂದು ತಿಳಿದುಕೊಂಡ ಬಳಿಕ ಉಳಿದ ತ್ಯಾಜ್ಯಗಳನ್ನು ದಹಿಸಲು ಉದ್ದೇಶಿಸಲಾಗಿದೆ.