ರಾಜ್ಯಸಭಾ ಅಧ್ಯಕ್ಷರನ್ನು ಭೇಟಿಯಾಗಿ ಕ್ಷಮೆ ಕೇಳಿ: ಅನಿರ್ದಿಷ್ಟಾವಧಿಗೆ ಅಮಾನತಾಗಿರುವ ರಾಘವ್ ಚಡ್ಡಾಗೆ ಸುಪ್ರೀಂ ಕೋರ್ಟ್ ಸೂಚನೆ

Update: 2023-11-03 14:53 GMT

ರಾಘವ್ ಚಡ್ಡಾ Photo- PTI

ಹೊಸದಿಲ್ಲಿ: ಸದನದಲ್ಲಿನ ನಿಮ್ಮ ವರ್ತನೆಗಾಗಿ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್‌ರನ್ನು ಭೇಟಿಯಾಗಿ ಕ್ಷಮೆ ಕೇಳಿ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆಮ್ ಆದ್ಮಿ ಪಕ್ಷ (ಆಪ್)ದ ಸಂಸದ ರಾಘವ್ ಚಡ್ಡಾಗೆ ಸೂಚನೆ ನೀಡಿದೆ.

ದಿಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರಕಾರ (ತಿದ್ದುಪಡಿ) ಮಸೂದೆ, 2023ನ್ನು ಪರಿಶೀಲಿಸುವ ಸಮಿತಿಯೊಂದಕ್ಕೆ ಕೆಲವು ಸಂಸದರನ್ನು ಅವರ ಅನುಮತಿಯಿಲ್ಲದೆ ಸೇರಿಸಲು ನಿರ್ಧರಿಸಿದ್ದರು ಎಂಬ ಆರೋಪದಲ್ಲಿ ಚಡ್ಡಾರನ್ನು ಆಗಸ್ಟ್ 11ರಂದು ಸಂಸತ್‌ನಿಂದ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿತ್ತು.

ಉಪರಾಷ್ಟ್ರಪತಿಯೂ ಆಗಿರುವ ಧನ್ಕರ್ ಚಡ್ಡಾರ ಕ್ಷಮಾಪಣೆಯನ್ನು ಸಹಾನುಭೂತಿಯಿಂದ ಪರಿಶೀಲಿಸಬೇಕು ಮತ್ತು ‘‘ವಿವಾದವನ್ನು ಇತ್ಯರ್ಥಪಡಿಸಲು ಪ್ರಯತ್ನಿಸಬೇಕು’’ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವೊಂದು ಹೇಳಿದೆ.

ರಾಘವ್ ಚಡ್ಡಾ ಮೊದಲ ಬಾರಿಯ ಸಂಸದರಾಗಿದ್ದಾರೆ ಮತ್ತು ಸಂಸತ್‌ನ ಅತಿ ಕಿರಿಯ ಸದಸ್ಯನೂ ಆಗಿದ್ದಾರೆ ಎಂದು ಮುಖ್ಯ ನ್ಯಾಯಾಧೀಶರು ಹೇಳಿದರು.

ರಾಜ್ಯಸಭಾ ಅಧ್ಯಕ್ಷರ ಕ್ಷಮೆ ಕೇಳುವುದರಲ್ಲಿ ‘‘ನಷ್ಟವಿಲ್ಲ’’ ಎಂದು ಚಡ್ಡಾರ ವಕೀಲ ಶದನ್ ಫರಸತ್ ನುಡಿದರು.

ನಂತರ, ದೀಪಾವಳಿ ಬಳಿಕ ಪ್ರಕರಣದ ವಿಚಾರಣೆಯನ್ನು ಪುನರಾರಂಭಿಸಲು ನ್ಯಾಯಾಲಯವು ನಿರ್ಧರಿಸಿತು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ತನಗೆ ಮಾಹಿತಿ ನೀಡುವಂತೆ ಅಟಾರ್ನಿ ಜನರಲ್‌ಗೆ ಸೂಚಿಸಿತು.

ಓರ್ವ ಸಂಸದನನ್ನು ಅನಿರ್ದಿಷ್ಟಾವಧಿಗೆ ಅಮಾನತಿನಲ್ಲಿರಿಸುವುದು ಆ ಸಂಸದನು ಪ್ರತಿನಿಧಿಸುವ ಜನ ಸಮುದಾಯದ ಹಕ್ಕುಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದಾಗಿದೆ ಎಂದು ಕಳೆದ ತಿಂಗಳು ಈ ಪ್ರಕರಣದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಹೇಳಿತ್ತು. ಆಪ್ ಸಂಸದನನ್ನು ಅನಿರ್ದಿಷ್ಟಾವಧಿವರೆಗೆ ಅಮಾನತಿನಲ್ಲಿರಿಸಲು ಸಂಸತ್‌ನ ನೈತಿಕ ಸಮಿತಿಗೆ ಅಧಿಕಾರವಿದೆಯೇ ಎಂಬುದಾಗಿಯೂ ಅದು ಪ್ರಶ್ನಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News