2014ರಲ್ಲಿ ಬಿಜೆಪಿಯೊಂದಿಗೆ ಪಿಡಿಪಿ ಕೈಜೋಡಿಸಿರದಿದ್ದರೆ, 370ನೇ ವಿಧಿ ರದ್ದಾಗುತ್ತಿರಲಿಲ್ಲ: ನ್ಯಾಷನಲ್ ಕಾನ್ಫರೆನ್ಸ್ ನಾಯಕ ವಾನಿ
ಶ್ರೀನಗರ : 2014ರಲ್ಲಿ ಸರಕಾರ ರಚಿಸಲು ಬಿಜೆಪಿಯೊಂದಿಗೆ ಪಿಡಿಪಿ ಕೈಜೋಡಿಸಿರದಿದ್ದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಹಾಗೂ 35ಎ ವಿಧಿ ರದ್ದಾಗುತ್ತಿರಲಿಲ್ಲ ಎಂದು ಬುಧವಾರ ಹಿರಿಯ ನ್ಯಾಷನಲ್ ಕಾನ್ಫರೆನ್ಸ್ ನಾಯಕ ನಾಸಿರ್ ಅಸ್ಲಾಮ್ ವಾನಿ ಅಭಿಪ್ರಾಯಪಟ್ಟಿದ್ದಾರೆ.
ಮೆಹಬೂಬ ಮುಫ್ತಿ ನೇತೃತ್ವದ ಪಕ್ಷವು ಜಮ್ಮು ಮತ್ತು ಕಾಶ್ಮೀಲರ ಜನತೆಯ ಅಭಿವೃದ್ಧಿ ಮತ್ತು ಪ್ರಗತಿಗೆ ಕೊಡುಗೆ ನೀಡುವ ಕುರಿತು ಎಂದೂ ಯೋಚಿಸಲಿಲ್ಲ ಎಂದೂ ಅವರು ಆರೋಪಿಸಿದರು.
“ಅವರು ಜನರಿಗೆ ಹೇಗೆ ಲಾಭ ಮಾಡಿಕೊಡಬೇಕು ಮತ್ತು ಅವರ ಪ್ರಗತಿ ಮಾಡಬೇಕು ಎಂಬ ಕುರಿತು ಯೋಚಿಸಲೇ ಇಲ್ಲ. ಅವರು ಯಾವಾಗಲೂ ಜನರನ್ನು ಪ್ರಚೋದಿಸುವುದಕ್ಕೇ ಪ್ರಯತ್ನಿಸಿದರು” ಎಂದು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾಗೆ ಸಲಹೆಗಾರರೂ ಆಗಿರುವ ವಾನಿ ಆರೋಪಿಸಿದರು.
ಈ ಕುರಿತು ವಿರೋಧ ಪಕ್ಷವು ಕೊಂಚ ಆತ್ಮನಿರೀಕ್ಷೆ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಈ ತಿಂಗಳ ಆರಂಭದಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿರುವ ನಿರ್ಣಯದ ಕುರಿತು ನ್ಯಾಷನಲ್ ಕಾನ್ಫರೆನ್ಸ್ ಗಂಭೀರವಾಗಿಲ್ಲ ಎಂಬ ಪಿಡಿಪಿ ಆರೋಪದ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ “2014ರಲ್ಲಿ ಅವರು ಬಿಜೆಪಿಗೆ ಬೆಂಬಲ ನೀಡಿರದಿದ್ದರೆ, ನಾವು 370ನೇ ವಿಧಿ ಹಾಗೂ 35ಎ ವಿಧಿಯನ್ನು ಕಳೆದುಕೊಳ್ಳುತ್ತಿರಲಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ವಿನಾಶವನ್ನೂ ನಾವು ನೋಡುತ್ತಿರಲಿಲ್ಲ” ಎಂದು ಅವರು ಉತ್ತರಿಸಿದರು.
“ನಾವು ನಮ್ಮ ಪ್ರಣಾಳಿಕೆಯಲ್ಲಿ ಯಾವ ಭರವಸೆ ನೀಡಿದ್ದೇವೆ ಅದನ್ನು ನೆರವೇರಿಸುತ್ತೇವೆ. ಅವರು (ಪಿಡಿಪಿ) ರಾಜಕೀಯ ಕ್ಷೋಭೆ ಸೃಷ್ಟಿಸುವುದರಲ್ಲಿ ಭಾಗಿಯಾಗಿದ್ದಾರೆ. ಅದು 2008 ಆಗಿರಲಿ ಅಥವಾ 2010 ಆಗಿರಲಿ. ಇದರಿಂದ ಅವರಿಗೆ 2016ರಲ್ಲಿ ಹಾನಿಯಾಯಿತು” ಎಂದು 2008 ಹಾಗೂ 2016ರಲ್ಲಿ ಕಣಿವೆ ರಾಜ್ಯದಲ್ಲಿ ಉಂಟಾಗಿದ್ದ ಅಶಾಂತಿ ಪರಿಸ್ಥಿತಿಯನ್ನು ಉಲ್ಲೇಖಿಸಿ ಅವರು ಹೇಳಿದರು.