ಉತ್ತರಪ್ರದೇಶ | ಸಂಭಾಲ್ ನ ಜಾಮಾ ಮಸೀದಿ ಆವರಣದಲ್ಲಿ ಸಮೀಕ್ಷೆ: ಸ್ಥಳೀಯರಿಂದ ಪ್ರತಿಭಟನೆ
ಲಕ್ನೋ: ಉತ್ತರಪ್ರದೇಶದ ಸಂಭಾಲ್ ನಗರದ ಹೃದಯಭಾಗದಲ್ಲಿರುವ ʼಜಾಮಾ ಮಸೀದಿʼಯ ಆವರಣದಲ್ಲಿ ಸಮೀಕ್ಷೆಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಮಂಗಳವಾರ ನಡೆಸಲಾಗಿದ್ದು, ಈ ವೇಳೆ ಸಮೀಕ್ಷೆಗೆ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಸಮೀಕ್ಷಾ ತಂಡ ಬಿಗಿ ಭದ್ರತೆಯಲ್ಲಿ ಮಸೀದಿ ಆವರಣದಲ್ಲಿ ಸಮೀಕ್ಷೆಯನ್ನು ನಡೆಸಿದೆ. ಈ ವೇಳೆ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಸ್ಥಳೀಯ ಸಂಸದ ಜಿಯಾ ಉರ್ ರೆಹಮಾನ್ ಮಧ್ಯಸ್ಥಿಕೆ ಬಳಿಕ ಪ್ರತಿಭಟನಾಕಾರರು ವಾಪಾಸ್ಸಾಗಿದ್ದಾರೆ.
ನ್ಯಾಯಾಲಯದ ಆದೇಶದ ಪ್ರಕಾರ ಸಮೀಕ್ಷೆಯನ್ನು ನಡೆಸಲಾಗಿದೆ. ಸಮೀಕ್ಷೆ ಪ್ರಕ್ರಿಯೆಯ ವೇಳೆ ಎರಡೂ ಪಕ್ಷಗಳು ಹಾಜರಿದ್ದವು. ನಾವು ಭದ್ರತೆಯನ್ನು ಒದಗಿಸಿದ್ದೇವೆ. ಸದ್ಯಕ್ಕೆ ಸರ್ವೆ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಸಂಭಾಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೊಘಲ್ ಚಕ್ರವರ್ತಿ ಬಾಬರ್ 1529ರಲ್ಲಿ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆಂದು ವಕೀಲ ವಿಷ್ಣು ಶಂಕರ್ ಜೈನ್, ಸಂಭಾಲ್ ನ ಕೇಲಾ ದೇವಿ ದೇವಸ್ಥಾನದ ರಿಷಿರಾಜ್ ಗಿರಿ ಸೇರಿದಂತೆ ಐವರು ಫಿರ್ಯಾದಿಗಳು ಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯಲ್ಲಿ ಜಾಮಾ ಮಸೀದಿಯನ್ನು ಹರಿ ಹರ್ ಮಂದಿರ ಎಂದು ವಾದಿಸಿದ್ದರು.
ಅರ್ಜಿದಾರರೂ ಆಗಿರುವ ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್, ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ, ಮಸೀದಿ ಸಮಿತಿ ಮತ್ತು ಸಂಭಾಲ್ ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಅರ್ಜಿಯಲ್ಲಿ ಕಕ್ಷಿದಾರರನ್ನಾಗಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.