ಮಹಾರಾಷ್ಟ್ರ | ಚುನಾವಣೆ ಮಧ್ಯೆ ಸಂಚಲನ ಮೂಡಿಸಿದ ʼಕ್ರಿಪ್ಟೋಕರೆನ್ಸಿʼ ಹಗರಣ: ಬಿಜೆಪಿಯ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ ಎಂದ ಸುಪ್ರಿಯಾ ಸುಳೆ
ಪುಣೆ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಮಧ್ಯೆ ʼಕ್ರಿಪ್ಟೋಕರೆನ್ಸಿʼ ಹಗರಣ ಮುನ್ನೆಲೆಗೆ ಬಂದಿದೆ. ಕ್ರಿಪ್ಟೋಕರೆನ್ಸಿ ವಂಚನೆ ಆರೋಪದ ಕುರಿತು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಎತ್ತಿರುವ ಐದು ಪ್ರಶ್ನೆಗಳಿಗೆ ಉತ್ತರಿಸಲು ನಾನು ಸಿದ್ಧ ಎಂದು ಎನ್ಸಿಪಿ( ಶರದ್ ಪವಾರ್ ಬಣ) ಸಂಸದೆ ಸುಪ್ರಿಯಾ ಸುಳೆ ಬುಧವಾರ ಹೇಳಿದ್ದಾರೆ.
ಸುಧಾಂಶು ತ್ರಿವೇದಿ ಅವರ 5 ಪ್ರಶ್ನೆಗಳಿಗೆ ಎಲ್ಲಿ ಬೇಕಾದರೂ ಉತ್ತರಿಸಲು ನಾನು ಸಿದ್ಧನಿದ್ದೇನೆ. ಅವರು ಹೇಳಿದ ಸಮಯ, ಸ್ಥಳ ಮತ್ತು ಅವರು ಹೇಳಿದ ವೇದಿಕೆಯಲ್ಲಿ ನಾನು ಅವರಿಗೆ ಉತ್ತರಿಸಲು ಸಿದ್ಧನಿದ್ದೇನೆ ಏಕೆಂದರೆ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂದು ಹೇಳಿದ್ದಾರೆ.
ಏನಿದು ಆರೋಪ?
ಮಂಗಳವಾರ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಅವರು 2018ರ ಕ್ರಿಪ್ಟೋಕರೆನ್ಸಿ ವಂಚನೆ ಪ್ರಕರಣದಲ್ಲಿ ಸುಪ್ರಿಯಾ ಸುಳೆ ಭಾಗಿಯಾಗಿದ್ದಾರೆಂದು ಆರೋಪಿಸಿ ಹಲವಾರು ಪ್ರಶ್ನೆಗಳನ್ನು ಎತ್ತಿದ್ದರು.
ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ತ್ರಿವೇದಿ, ನಾವು 5 ಪ್ರಶ್ನೆಗಳನ್ನು ಕೇಳಲು ಬಯಸುತ್ತೇವೆ, ಒಂದು ನೀವು ಬಿಟ್ಕಾಯಿನ್ ವ್ಯವಹಾರದಲ್ಲಿ ಭಾಗಿಯಾಗಿದ್ದೀರಾ? ಎರಡನೆಯದಾಗಿ, ಗೌರವ್ ಗುಪ್ತಾ ಅಥವಾ ಮೆಹ್ತಾ ಎಂಬ ವ್ಯಕ್ತಿಯೊಂದಿಗೆ ನೀವು ಸಂಪರ್ಕ ಹೊಂದಿದ್ದೀರಾ? ಮೂರನೆಯದಾಗಿ ಮೆಸೇಜ್ ಗಳು ನಿಮ್ಮದಲ್ಲವೇ? ನಾಲ್ಕನೆಯದಾಗಿ ಆಡಿಯೊ ಕ್ಲಿಪ್ ನಲ್ಲಿನ ಆಡಿಯೊ ನಿಮ್ಮದಲ್ಲವೇ? ಐದನೆಯದಾಗಿ ಆಡಿಯೋದಲ್ಲಿ ಹೇಳಿದ 'ದೊಡ್ಡ ಜನ' ಯಾರು? ಎಂದು ಪ್ರಶ್ನಿಸಿದ್ದರು.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಆಡಿಯೋ ಕ್ಲಿಪ್ ನಾನು ಕೇಳಿದ್ದೇನೆ, ಅವರಲ್ಲಿ ಒಬ್ಬರು ನನ್ನ ಸಹೋದರಿ ಮತ್ತು ಇನ್ನೊಬ್ಬರ ಜೊತೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಆಡಿಯೋ ಕ್ಲಿಪ್ ನಲ್ಲಿರುವುದು ಅವರ ಧ್ವನಿಯಾಗಿದೆ. ನನಗೆ ಅದು ಗೊತ್ತಾಗುತ್ತದೆ. ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.
ಮಂಗಳವಾರ ಪುಣೆಯ ಮಾಜಿ-ಐಪಿಎಸ್ ಅಧಿಕಾರಿ ರವೀಂದ್ರನಾಥ ಪಾಟೀಲ್ ಅವರು ಎನ್ಸಿಪಿ-(ಎಸ್ಪಿ) ನಾಯಕಿ ಮತ್ತು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಮತ್ತು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದು, 2018ರ ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಹಣ ಹೂಡಲು ಅದನ್ನೇ ಬಳಸಿಕೊಂಡಿದ್ದಾರೆ ಎಂದು ಹೇಳಿದ್ದರು.
ಇದೇ ಸನ್ನಿವೇಶ ಬಳಸಿಕೊಂಡ ಬಿಜೆಪಿ, ನಾನಾ ಪಟೋಲೆ ಹಾಗೂ ಸುಪ್ರಿಯಾ ಸುಳೆ ಅವರು 'ಬಿಟ್ ಕಾಯಿನ್ ಹಗರಣ'ದಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆ ಇದೆ ಎಂದು ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದರು. ಆದರೆ ಆಡಿಯೋ ಕ್ಲಿಪ್ ನನ್ನದಲ್ಲ ಎಂದು ಸುಪ್ರಿಯಾ ಸುಳೆ ಆರೋಪವನ್ನು ತಳ್ಳಿ ಹಾಕಿದ್ದಾರೆ.