ಮಣಿಪುರ ಎನ್ ಡಿಎಯಲ್ಲಿ ತೀವ್ರ ಒಡಕು: ಸಿಎಂ ಸಭೆಗೆ 37 ಶಾಸಕರ ಪೈಕಿ 19 ಮಂದಿ ಗೈರು

Update: 2024-11-20 14:25 IST
Photo of Biren Singh

ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ (PTI)

  • whatsapp icon

ಗುವಾಹತಿ: ಮಣಿಪುರದಲ್ಲಿ ಜನಾಂಗೀಯ ಸಂಘರ್ಷವನ್ನು ನಿಭಾಯಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ವಿರುದ್ಧ ಬಿಜೆಪಿ ಶಾಸಕರಲ್ಲಿ ಇರುವ ಅಸಮಾಧಾನ ಭುಗಿಲೆದ್ದಿದ್ದು, ಸಿಎಂ ಕರೆದ ಸಭೆಗೆ 37 ಶಾಸಕರ ಪೈಕಿ 19 ಮಂದಿ ಗೈರುಹಾಜರಾಗಿದ್ದಾರೆ. ಜಿರಿಬಾಮ್ ನಲ್ಲಿ ಆಸರೆ ಪಡೆದಿದ್ದ ಮೈತೈ ಸಮುದಾಯಕ್ಕೆ ಸೇರಿದ ಆರು ಮಂದಿಯನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ ಎನ್ನಲಾದ ಕುಕಿ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿತ್ತು.

ಈ ಮಧ್ಯೆ ಸಭೆಗೆ ಗೈರುಹಾಜರಾದ ಸಂಬಂಧ ಸಿಎಂ ಕಾರ್ಯಾಲಯದಿಂದ ಸಚಿವರೂ ಸೇರಿದಂತೆ 11 ಮಂದಿ ಎನ್ ಡಿಎ ಸದಸ್ಯರಿಗೆ ನೋಟಿಸ್ ನೀಡಲಾಗಿದೆ ಎಂದು ಅನಧಿಕೃತ ಮೂಲಗಳಿಂದ ತಿಳಿದು ಬಂದಿದೆ. ರಾಜ್ಯದಲ್ಲಿ ಯಾವುದೇ ಸಮುದಾಯಕ್ಕೆ ಸೇರಿದ ಜನರ ಹಿತರಕ್ಷಣೆಗಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಸಿಎಂ ಬಿರೇನ್ ಸಿಂಗ್ ವಿಡಿಯೊ ಸಂದೇಶ ನೀಡಿದ್ದಾರೆ.

ಮಣಿಪುರ ಸಂಘರ್ಷವನ್ನು ನಿಭಾಯಿಸುವಲ್ಲಿ ಸಿಎಂ ವಿಫಲರಾಗಿದ್ದಾರೆ ಎಂದು ಆಪಾದಿಸಿ ಮೇಘಾಲಯ ಸಿಎಂ ಕೊನಾರ್ಡ್ ಸಂಗ್ಮಾ ಅವರು ಎನ್ ಪಿಪಿ, ಎನ್ ಡಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸು ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಹಿಂಸಾಚಕ್ರವನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಎಲ್ಲ ಬಿಜೆಪಿ ಹಾಗೂ ಮಿತ್ರಕೂಟದ ಶಾಸಕರಿಗೆ ಪತ್ರ ಬರೆದು ಸಭೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.

60 ಸದಸ್ಯಬಲದ ವಿಧಾನಸಭೆಯಲ್ಲಿ ಎನ್ ಡಿಎ 53 ಶಾಸಕರನ್ನು ಹೊಂದಿದೆ. ಅದರಲ್ಲಿ ಎನ್ ಪಿಪಿಯ ಏಳು, ನಾಗಾ ಪೀಪಲ್ಸ್ ಫ್ರಂಟ್ ನ ಐದು, ಜೆಡಿಯುನ ಒಬ್ಬರು ಶಾಸಕರು ಮತ್ತು ಮೂವರು ಪಕ್ಷೇತರರು ಸೇರಿದ್ದಾರೆ. ಬಿಜೆಪಿಯ 37 ಶಾಸಕರ ಪೈಕಿ ಏಳು ಮಂದಿ ಕುಕಿ ಸಮುದಾಯಕ್ಕೆ ಸೇರಿದವರು. ಈ ಎಲ್ಲರೂ ಸಭೆಗೆ ಗೈರುಹಾಜರಾಗಿದ್ದಾರೆ. ಅಚ್ಚರಿಯ ಅಂಶವೆಂದರೆ ಎನ್ ಪಿಪಿ ಬೆಂಬಲ ವಾಪಾಸು ಪಡೆದರೂ, ಪಕ್ಷದ ಏಳು ಶಾಸಕರ ಪೈಕಿ 4 ಮಂದಿ ಸಿಎಂ ಸಭೆಗೆ ಹಾಜರಾಗಿದ್ದರು.

ಗೈರುಹಾಜರಾದ ಪ್ರಮುಖ ಬಿಜೆಪಿ ಮುಖಂಡರೆಂದರೆ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಯುಮ್ನಮ್ ಖೇಮ್ ಚಂದ್ ಸಿಂಗ್. ಪಕ್ಷದ ಮೂವರು ಶಾಸಕರು ಮತ್ತು ಎನ್ ಪಿಎಫ್ ನ ಒಬ್ಬರು ಶಾಸಕರು ಮೊದಲೇ ಮಾಹಿತಿ ನೀಡಿ, ಆರೋಗ್ಯ ಸಮಸ್ಯೆ ಕಾರಣದಿಂದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ವಿರೋಧ ಪಕ್ಷಗಳ ಸಾಲಿನಲ್ಲಿ ಕಾಂಗ್ರೆಸ್ ನ ಐವರು ಶಾಸಕರು ಮತ್ತು ಕುಕಿ ಪೀಪಲ್ ಅಲಯನ್ಸ್ ನ ಇಬ್ಬರು ಶಾಸಕರಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News