ಭಾರತದಲ್ಲಿ ́ಗೋರಕ್ಷಕರʼ ಹಿಂಸಾತ್ಮಕ ಕೃತ್ಯಗಳ ಪ್ರಚಾರಕ್ಕೆ Instagram ವೇದಿಕೆ ಕಲ್ಪಿಸಿದೆ: ವರದಿ
ಹೊಸದಿಲ್ಲಿ: ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಮ್ (Instagram) ಭಾರತದಲ್ಲಿ ʼಗೋರಕ್ಷಕರಿಗೆʼ ಉತ್ತೇಜನ ನೀಡುತ್ತಿದೆ ಎಂದು ಸಂಘಟಿತ ದ್ವೇಷದ ಅಧ್ಯಯನದ ಕುರಿತ ಚಿಂತಕರ ಚಾವಡಿ ʼಥಿಂಕ್ ಟ್ಯಾಂಕ್ʼ (think tank) ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಸಾಮಾಜಿಕ ಮಾಧ್ಯಮ ವೇದಿಕೆಯಿಂದ ʼಗೋರಕ್ಷಕರʼ ಹಿಂಸಾತ್ಮಕ ಪೋಸ್ಟ್ ಗಳನ್ನು ತೆಗೆದುಹಾಕಲು ಇನ್ಸ್ಟಾಗ್ರಾಮ್ ವಿಫಲವಾಗಿದೆ ಮತ್ತು ಕೆಲವು ಪ್ರಕರಣಗಳಲ್ಲಿ ಗೋರಕ್ಷಕರಿಗೆ ನಿಧಿ ಸಂಗ್ರಹಿಸಲು ವೇದಿಕೆಯನ್ನು ಕಲ್ಪಿಸಿದೆ ಎಂದು ವಾಷಿಂಗ್ಟನ್ ಮೂಲದ ಚಿಂತಕರ ಚಾವಡಿ ʼಥಿಂಕ್ ಟ್ಯಾಂಕ್ʼ ತನ್ನ ಅಧ್ಯಯನ ವರದಿಯಲ್ಲಿ ತಿಳಿಸಿದೆ.
ʼಥಿಂಕ್ ಟ್ಯಾಂಕ್ʼ ʼStreaming Violence: How Instagram Fuels Cow Vigilantism in Indiaʼ ಎಂಬ ಶೀರ್ಷಿಕೆಯ ವರದಿಯನ್ನು ಸಿದ್ದಪಡಿಸಿದೆ. ಈ ವರದಿಯ ಪ್ರಕಾರ, 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಭಾರತದಲ್ಲಿ “ಗೋ ರಕ್ಷಣೆ” ನೆಪದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಗುಂಪು ಹತ್ಯೆಗಳು ಹೆಚ್ಚಾಗಿದೆ. ದೊಡ್ಡ ಮಟ್ಟದಲ್ಲಿ ಯುವ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ವೇದಿಕೆ ಇನ್ಸ್ಟಾಗ್ರಾಮ್ ಈ ಹಿಂಸಾತ್ಮಕ ಗುಂಪುಗಳಿಗೆ ನೇಮಕಾತಿ ಮತ್ತು ನಿಧಿಸಂಗ್ರಹಣೆಯ ಪ್ರಮುಖ ವೇದಿಕೆಯಾಗಿದೆ ಎಂದು ಹೇಳಿದೆ.
ʼಥಿಂಕ್ ಟ್ಯಾಂಕ್ʼ ಈ ಕುರಿತು ದ್ವೇಷ ಮತ್ತು ಹಿಂಸಾಚಾರವನ್ನು ಹರಡುವ 1,023 Instagram ಖಾತೆಗಳನ್ನು ವಿಶ್ಲೇಷಿಸಿದೆ. ಈ ಖಾತೆಗಳಲ್ಲಿ ಹಂಚಿಕೊಂಡ 30% ವಿಡಿಯೋಗಳಲ್ಲಿ ಗೋರಕ್ಷಕರು ಜಾನುವಾರುಗಳನ್ನು ಸಾಗಿಸುವ ಜನರ ವಿರುದ್ಧ ದೈಹಿಕ ಹಿಂಸಾಚಾರದಲ್ಲಿ ತೊಡಗಿರುವುದನ್ನು ತೋರಿಸುತ್ತದೆ. ಈ ಪ್ರಕರಣದಲ್ಲಿ ಸಂತ್ರಸ್ತರು ಮುಸ್ಲಿಮರಾಗಿರುತ್ತಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಅವರು ಸಂತ್ರಸ್ತರ ಹೆಸರನ್ನು ಕೇಳಿದಾಗ ಅವರ ಪ್ರತಿಕ್ರಿಯೆಯಿಂದ ಇದು ಬಯಲಾಗುತ್ತದೆ ಎಂದು ಅಧ್ಯಯನವು ತಿಳಿಸಿದೆ.
ಇಂತಹ ದ್ವೇಷ ಹಂಚುವ ಖಾತೆಗಳಲ್ಲಿ 834 ಖಾತೆಗಳಲ್ಲಿನ ಪೋಸ್ಟ್ ಮಾಡುತ್ತಿರುವ ರಾಜ್ಯಗಳು ಅಥವಾ ಸ್ಥಳವನ್ನು ಗುರುತಿಸಬಹುದಾಗಿದೆ. ಈ 834 ಖಾತೆಗಳಲ್ಲಿ ಕನಿಷ್ಠ 793 ಅಥವಾ 95% ಖಾತೆಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ಸೇರಿದ್ದಾಗಿದೆ. ಇದರಲ್ಲಿ 320 ಖಾತೆಗಳೊಂದಿಗೆ ಹರ್ಯಾಣ ಮೊದಲ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ʼಥಿಂಕ್ ಟ್ಯಾಂಕ್ʼ 121 ಇನ್ಸ್ಟಾಗ್ರಾಮ್ ರೀಲ್ಸ್ ಗಳನ್ನು ಅಧ್ಯಯನದ ವೇಳೆ ವಿಶ್ಲೇಷಿಸಿದೆ. ರೀಲ್ಸ್ ಗಳಲ್ಲಿ ಗೋರಕ್ಷಕರು ಜಾನುವಾರುಗಳನ್ನು ಸಾಗಿಸುವ ವ್ಯಕ್ತಿಗಳ ವಿರುದ್ಧ ದೈಹಿಕ ಹಿಂಸೆಯಲ್ಲಿ ತೊಡಗಿರುವುದನ್ನು ತೋರಿಸುತ್ತದೆ. ಈ ವಿಡಿಯೋಗಳು ಹೆಚ್ಚಿನ ವೀಕ್ಷಣೆಯಾಗಿರುವುದನ್ನು ಅಧ್ಯಯನವು ಪತ್ತೆ ಹಚ್ಚಿದೆ.
ಇದಲ್ಲದೆ ಅನೇಕ ಗೋರಕ್ಷಕ ಖಾತೆಗಳು ಇನ್ಸ್ಟಾಗ್ರಾಮ್ ಪ್ರೊಫೈಲ್ ಗಳಲ್ಲಿ ದೇಣಿಗೆ ಸಂಗ್ರಹಿಸಿದೆ, ಈ ದೇಣಿಗೆ ಸಂಗ್ರಹಣೆಗೆ ಇನ್ಸ್ಟಾಗ್ರಾಮ್ ವೇದಿಕೆಯಾಗಿದೆ ಎಂದು ವರದಿ ತಿಳಿಸಿದೆ. ಇಷ್ಟೆಲ್ಲಾ ದ್ವೇಷದ ಪೋಸ್ಟ್ ಗಳನ್ನು ಮಾಡಲಾಗುತ್ತಿದ್ದರೂ, Instagram ನಿಯಮಗಳ ಸ್ಪಷ್ಟ ಉಲ್ಲಂಘನೆ ಕಂಡು ಬರುತ್ತಿದ್ದರೂ Instagram ಇಂತಹ ದ್ವೇಷದ ಯಾವುದೇ ಪೋಸ್ಟ್ಗಳನ್ನು ತೆಗೆದುಹಾಕಿಲ್ಲ, ನಿರ್ಬಂಧಿಸಿಲ್ಲ ಎಂದು ವರದಿಯು ಬಹಿರಂಗಗೊಳಿಸಿದೆ