ತ್ರಿಪುರಾ ಬಾರ್‌ ಅಸೋಸಿಯೇಶನ್‌ ಚುನಾವಣೆಯಲ್ಲಿ ಕಾಂಗ್ರೆಸ್‌, ಸಿಪಿಐ(ಎಂ) ಬೆಂಬಲಿತ ಸಂಘಟನೆಗೆ ಜಯ

Update: 2024-03-26 08:30 GMT

ಸಾಂದರ್ಭಿಕ ಚಿತ್ರ |Photo: PTI

ಅಗರ್ತಲಾ: ತ್ರಿಪುರಾ ಬಾರ್‌ ಅಸೋಸಿಯೇಶನ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಸಿಪಿಐ(ಎಂ) ಗಳ ಕಾನೂನು ಸಂಘಟನೆಗಳೊಂದಿಗೆ ಸಂಯೋಜಿತವಾಗಿರುವ ವಕೀಲರ ಸಂಘ - ಸೊಂಗ್‌ಬಿಧನ್‌ ಬಚಾವೋ ಮಂಚ್‌ (ಸಂವಿಧಾನ ಉಳಿಸಿ ಮಂಚ್)‌ ಬಿಜೆಪಿ ಬೆಂಬಲಿತ ಐನ್‌ಜೀಬಿ ಉನ್ನಯನ್‌ ಮಂಚ್‌ ಅನ್ನು ಸೋಲಿಸಿದೆ.

ಚುನಾವಣೆಯಲ್ಲಿ ಬಾರ್‌ ಅಸೋಸಿಯೇಶನ್‌ ಅಧ್ಯಕ್ಷ, ಕಾರ್ಯದರ್ಶಿ, ಸಹ ಕಾರ್ಯದರ್ಶಿ ಮತ್ತು ಆರು ಕಾರ್ಯಕಾರಿ ಸದಸ್ಯರು ಸಂವಿಧಾನ ಉಳಿಸಿ ಮಂಚ್‌ನಿಂದ ಆಯ್ಕೆಯಾಗಿದ್ದಾರೆ ಎಂದು ಈ ಮಂಚ್‌ನಿಂದ ಸ್ಪರ್ಧಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾದ ವಕೀಲ ಕೌಶಿಕ್‌ ಇಂದು ಹೇಳಿದ್ದಾರೆ.

ವಕೀಲರಾದ ಮೃಣಾಲ್‌ ಕಾಂತಿ ಬಿಸ್ವಾಸ್‌, ಸುಬ್ರತಾ ದೇಬನಾಥ್‌, ಕೌಶಿಕ್‌ ಇಂದು ಅವರು ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಂದೀಪ್‌ ದತ್ತ ಚೌಧುರಿ ಹೇಳಿದ್ದಾರೆ.

ಈ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಪ್ರತಿಕ್ರಿಯಿಸಿದ ತ್ರಿಪುರಾ ವಿಪಕ್ಷ ನಾಯಕ ಜಿತೇಂದ್ರ ಚೌಧುರಿ ಸಂವಿಧಾನ ಉಳಿಸಿ ಮಂಚ್‌ನಿಂದ ಆಯ್ಕೆಯಾದವರನ್ನು ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲದೆ ಇದು ಕೇವಲ ವಕೀಲರ ಚುನಾವಣೆಯೆಂದು ಭಾವಿಸಬಾರದು, ಭಾರತೀಯ ಜನರ ಅಭಿಪ್ರಾಯದ ಪ್ರತಿಬಿಂಬವಾಗಿದೆ, ನಮ್ಮ ಸಂವಿಧಾನದ ಆಶಯವನ್ನು ಬುಡಮೇಲುಗೊಳಿಸುವ ಆಡಳಿತ ಪಕ್ಷದ ಸಂಚಿನ ವಿರುದ್ದ ಜನರ ಆಕ್ರೋಶವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯ ಸುದೀಪ್‌ ರಾಯ್‌ ಬರ್ಮನ್‌ ಮಾತನಾಡಿ, ಬಾರ್‌ ಅಸೋಸಿಯೇಶನ್‌ ಚುನಾವಣಾ ಫಲಿತಾಂಶವು ಸಮಾಜಕ್ಕೆ ಒಂದು ದಿಕ್ಕನ್ನು ತೋರಿಸಿದೆ ಹಾಗೂ ಮುಂದಿನ ಲೋಕಸಭಾ ಚುನಾವಣೆ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News