ಸಿಬಿಐ ತನಿಖೆ ಹಿಂಪಡೆದ ಪ್ರಕರಣ | ಕರ್ನಾಟಕ ಸರಕಾರ, ಡಿಸಿಎಂ ಶಿವಕುಮಾರ್‌ಗೆ ಸುಪ್ರೀಂ ಕೋರ್ಟ್ ನೋಟಿಸ್
ಹೊಸದಿಲ್ಲಿ : ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಭ್ರಷ್ಟಾಚಾರ ಆರೋಪದ ತನಿಖೆಯನ್ನು ಮರು ಆರಂಭಿಸಲು ಸಿಬಿಐ ಸಲ್ಲಿಸಿದ ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕರ್ನಾಟಕ ಸರಕಾರ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ನೋಟಿಸು ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ಪೀಠ ಸಿಬಿಐ ಸಲ್ಲಿಸಿದ ಅರ್ಜಿ ಕುರಿತಂತೆ ಕರ್ನಾಟಕ ಸರಕಾರ ಹಾಗೂ ಡಿ.ಕೆ. ಶಿವಕುಮಾರ್ ಅವರ ಪ್ರತಿಕ್ರಿಯೆ ಕೋರಿದೆ.
ಆದಾಯ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಈ ಹಿಂದಿನ ಬಿಜೆಪಿ ಸರಕಾರ 2019ರಲ್ಲಿ ಸಿಬಿಐ ತನಿಖೆಗೆ ಅನುಮತಿ ನೀಡಿತ್ತು. ಈ ಅನುಮತಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸಂಪುಟ 2023 ನವೆಂಬರ್ 23ರಂದು ಹಿಂಪಡೆದಿತ್ತು.
ಅನುಮತಿ ಹಿಂಪಡೆದಿರುವ ಕಾಂಗ್ರೆಸ್ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಈ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ಹೇಳಿದ ಕರ್ನಾಟಕ ಉಚ್ಚ ನ್ಯಾಯಾಲಯ ಆಗಸ್ಟ್ 29ರಂದು ಅರ್ಜಿಯನ್ನು ವಜಾಗೊಳಿಸಿತ್ತು.
ಉಚ್ಚ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿತ್ತು. ಇದೇ ರೀತಿ ಯತ್ನಾಳ್ ಕೂಡ ಮೇಲ್ಮನವಿ ಸಲ್ಲಿಸಿದ್ದರು. ಯತ್ನಾಳ್ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿ ಈ ಹಿಂದೆ ಇದೇ ಪೀಠ ರಾಜ್ಯ ಸರಕಾರ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ನೋಟಿಸು ಜಾರಿ ಮಾಡಿತ್ತು. ಈಗ ಸಿಬಿಐ ಸಲ್ಲಿಸಿದ ಮೇಲ್ಮನವಿ ಕುರಿತಂತೆ ಪೀಠ ನೋಟಿಸು ಜಾರಿ ಮಾಡಿದೆ.
ಶಿವಕುಮಾರ್ ಅವರು 2013 ಹಾಗೂ 2018ರ ನಡುವೆ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದರು ಎಂದು ಸಿಬಿಐ ಆರೋಪಿಸಿತ್ತು. ಈ ಅವಧಿಯಲ್ಲಿ ಅವರು ಹಿಂದಿನ ಕಾಂಗ್ರೆಸ್ ಸರಕಾರದ ಸಚಿವರಾಗಿದ್ದರು.
2019 ಸೆಪ್ಟಂಬರ್ 25ರಂದು ಬಿಜೆಪಿ ಸರಕಾರ ಅನುಮತಿ ನೀಡಿದ ಬಳಿಕ ಸಿಬಿಐ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಅದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣವನ್ನು 2020 ಅಕ್ಟೋಬರ್ 3ರಂದು ದಾಖಲಿಸಿತ್ತು.