ಜಮ್ಮು-ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಜಗತ್ತಿನ ಯಾವುದೇ ಶಕ್ತಿಗೂ ಮರು ಸ್ಥಾಪಿಸಲು ಸಾಧ್ಯವಿಲ್ಲ : ಪ್ರಧಾನಿ ಮೋದಿ

Update: 2024-11-08 15:48 GMT

 ನರೇಂದ್ರ ಮೋದಿ | PC : PTI 

ಧುಲೆ : ಜಗತ್ತಿನ ಯಾವುದೇ ಶಕ್ತಿಗೆ ಕೂಡ ಜಮ್ಮು ಹಾಗೂ ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟ ಜಮ್ಮು ಹಾಗೂ ಕಾಶ್ಮೀರದಿಂದ ಸಂವಿಧಾನವನ್ನು ಕಿತ್ತುಕೊಳ್ಳಲು ಬಯಸುತ್ತಿದೆ. ಒಂದು ಜಾತಿಯ ವಿರುದ್ಧ ಇನ್ನೊಂದು ಜಾತಿಯನ್ನು ಎತ್ತಿ ಕಟ್ಟುತ್ತಿದೆ ಎಂದು ಅವರು ಆರೋಪಿಸಿದರು.

ನವೆಂಬರ್ 20ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಇಲ್ಲಿ ರ‍್ಯಾಲಿ

ಉದ್ದೇಶಿಸಿ ಮಾತನಾಡಿದ ಅವರು, ‘ಇಂಡಿಯಾ’ ಒಕ್ಕೂಟ ದಲಿತರು ಹಾಗೂ ಆದಿವಾಸಿಗಳನ್ನು ಪ್ರಚೋದಿಸಲು ಖಾಲಿ ಪುಸ್ತಕವನ್ನು ತೋರಿಸಿ ಸಂವಿಧಾನವೆಂದು ಬಿಂಬಿಸುತ್ತಿದೆ ಎಂದರು.

ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಪಾಕಿಸ್ತಾನ ಕಾರ್ಯಸೂಚಿಯನ್ನು ಉತ್ತೇಜಿಸಬಾರದು ಹಾಗೂ ಪ್ರತ್ಯೇಕತಾವಾದಿಗಳ ಭಾಷೆಯಲ್ಲಿ ಮಾತನಾಡಬಾರದು. ತನಗೆ ಜನರ ಆಶೀರ್ವಾದ ಇರುವ ವರೆಗೆ ಈ ಕಾರ್ಯಸೂರ್ಚಿ ಯಶಸ್ವಿಯಾಗಲಾರದು ಎಂದು ಅವರು ಹೇಳಿದರು.

ಜಮ್ಮು ಹಾಗೂ ಕಾಶ್ಮೀರದಲ್ಲಿ ಕೇವಲ ಅಂಬೇಡ್ಕರ್ ಅವರ ಸಂವಿಧಾನವನ್ನು ಮಾತ್ರ ಅನುಸರಿಸಲಾಗುವುದು.  370 ವಿಧಿಯನ್ನು ಮತ್ತೆ ಜಾರಿಗೆ ತರಲು ಜಮ್ಮು ಹಾಗೂ ಕಾಶ್ಮೀರದ ವಿಧಾನ ಸಭೆಯಲ್ಲಿ ನಿರ್ಣಯವನ್ನು ಹೇಗೆ ಮಂಡಿಸಲಾಯಿತು ಎಂದು ನೀವು ನೋಡಿರಬೇಕು. ಬಿಜೆಪಿ ಶಾಸಕರು ಪ್ರತಿಭಟಿಸಿದಾಗ, ಅವರನ್ನು ಹೊರಗೆ ಹಾಕಲಾಯಿತು. ದೇಶ ಹಾಗೂ ಮಹಾರಾಷ್ಟ್ರ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

‘‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳು ಸಂಘಟಿತವಾಗಿದ್ದರೆ, ಕಾಂಗ್ರೆಸ್ ರಾಜಕೀಯ ಅಂತ್ಯಗೊಳ್ಳಲಿದೆ. ಕಾಂಗ್ರೆಸ್ ಒಂದು ಜಾತಿಯ ವಿರುದ್ಧ ಇನ್ನೊಂದು ಜಾತಿಯನ್ನು ಎತ್ತಿ ಕಟ್ಟುವ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ನಡುವಿನ ಒಗ್ಗಟ್ಟನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ’’ ಎಂದು ಮೋದಿ ಹೇಳಿದರು.

ನೆಹರೂ ಅವರ ಕಾಲದಿಂದಲೂ ಕಾಂಗ್ರೆಸ್ ಹಾಗೂ ಅವರ ಕುಟುಂಬ ಮೀಸಲಾತಿಯನ್ನು ವಿರೋಧಿಸುತ್ತಿತ್ತು. ಈಗ ಅವರ ನಾಲ್ಕನೇ ತಲೆಮಾರಿನ ಯುವರಾಜ ಜಾತಿ ವಿಭಜನೆಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾವು ಸಂಘಟಿತರಾದರೆ ಸುರಕ್ಷಿತವಾಗುತ್ತೇವೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ನರೇಂದ್ರ ಮೋದಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News