ರಾಜಿಗೆ ಅಧಿಕಾರಿಗಳ ನಕಾರ | ಡಿ.ರೂಪಾ ವಿರುದ್ಧ ರೋಹಿಣಿ ಸಿಂಧೂರಿ ದಾಖಲಿಸಿದ್ದ ಪ್ರಕರಣದ ವಿಚಾರಣೆ ಮುಂದುವರಿಕೆ : ಸುಪ್ರೀಂ ಕೋರ್ಟ್

Update: 2024-11-08 17:19 GMT

ಡಿ.ರೂಪಾ, ರೋಹಿಣಿ ಸಿಂಧೂರಿ | PC: deccanherald.com

ಹೊಸದಿಲ್ಲಿ : ವೈಯಕ್ತಿಕ ಕಾರಣಕ್ಕೆ ಪರಸ್ಪರ ಜಗಳ ಮಾಡಿಕೊಂಡಿದ್ದ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವೆ ಪರಸ್ಪರ ರಾಜಿ ಏರ್ಪಡದ ಕಾರಣ ಮಾನಹಾನಿ ಮೊಕದ್ದಮೆಯ ವಿಚಾರಣೆ ಮುಂದುವರಿಯಲಿದೆ ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ.

ಇದರೊಂದಿಗೆ, ರೋಹಿಣಿ ಸಿಂಧೂರಿ ತಮ್ಮ ವಿರುದ್ಧ ದಾಖಲಿಸಿರುವ ಮಾನಹಾನಿ ಮೊಕದ್ದಮೆಯನ್ನು ವಜಾಗೊಳಿಸಬೇಕು ಎಂದು ತಾವು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲೂ ರೂಪಾ ಅವರಿಗೆ ನ್ಯಾಯಮೂರ್ತಿ ಅಭಯ್ ಓಕಾ ನೇತೃತ್ವದ ತ್ರಿಸದಸ್ಯ ಪೀಠ ಅನುಮತಿ ನೀಡಿತು.

ಇಬ್ಬರು ಅಧಿಕಾರಿಗಳು ಈ ವಿಚಾರದಲ್ಲಿ ಪರಸ್ಪರ ರಾಜಿಗೆ ತಲುಪಲು ವಿಫಲವಾಗಿದ್ದಾರೆ ಎಂದು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಹಾಗೂ ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಾಸಿಹ್ ಅವರನ್ನೂ ಒಳಗೊಂಡಿದ್ದ ನ್ಯಾಯಪೀಠಕ್ಕೆ ಮಾಹಿತಿ ನೀಡಲಾಯಿತು.

ಮಾನಹಾನಿ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲು ರೂಪಾ ಪರ ಹಿರಿಯ ವಕೀಲರಾದ ಆದಿತ್ಯ ಸೊಂಧಿ ಸಹಮತ ವ್ಯಕ್ತಪಡಿಸಿದರೂ, ಅದಕ್ಕೆ ಒಪ್ಪದ ರೋಹಿಣಿ ಸಿಂಧೂರಿ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ, ರೂಪಾರ ಬಳಿ ವೈಯಕ್ತಿಕ ಕ್ಷಮಾಪಣೆ ಕೋರಿದರು. ಈ ಸಂದರ್ಭದಲ್ಲಿ ಡಿ.ರೂಪಾ ಹಾಗೂ ರೋಹಿಣಿ ಸಿಂಧೂರಿ ಇಬ್ಬರೂ ನ್ಯಾಯಾಲಯದಲ್ಲಿ ಹಾಜರಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳಲ್ಲಿ ಆರೋಪ ಮಾಡಿದ್ದ ಐಪಿಎಸ್ ಅಧಿಕಾರಿ ಡಿ.ರೂಪಾರ ಉದ್ದೇಶವನ್ನು ನ್ಯಾಯಪೀಠ ಪ್ರಶ್ನಿಸಿತು.

“ಸಾರ್ವಜನಿಕ ತಾಣಗಳಲ್ಲಿ ಇಂತಹ ಪೋಸ್ಟ್ ಗಳನ್ನು ಮಾಡುವಲ್ಲಿ ನಿಮ್ಮ ಕಕ್ಷಿದಾರರು (ರೂಪಾ) ಹೇಗೆ ಸಂಬಂಧಿತ ವ್ಯಕ್ತಿಯಾಗಿದ್ದಾರೆ? ಪ್ರತಿವಾದಿಯ ವಿರುದ್ಧ ನೀವು ಸಾರ್ವಜನಿಕ ತಾಣದಲ್ಲಿನ ಪೋಸ್ಟ್ ಗಳಲ್ಲಿ ಮಾಡಿರುವ ಇಂತಹ ಆರೋಪಗಳ ತನಿಖಾಧಿಕಾರಿಯಾಗಿದ್ದಿರಾ?” ಎಂದು ರೂಪಾ ಪರ ವಕೀಲರನ್ನು ಖಾರವಾಗಿ ಪ್ರಶ್ನಿಸಿತು.

ಅಧಿಕಾರಿಗಳಾಗಿ ಅವರ ವೃತ್ತಿಜೀವನಕ್ಕೆ ಹಾನಿಯಾಗುವುದರಿಂದ, ಅವರಿಬ್ಬರೂ ವ್ಯಾಜ್ಯಗಳಲ್ಲಿ ಮುಳುಗುವುದಕ್ಕಿಂತ ಪರಸ್ಪರ ರಾಜಿಯಾಗುವುದೊಳಿತು ಎಂದು ನ್ಯಾಯಪೀಠ ಸಲಹೆ ನೀಡಿತು. ಹಿರಿಯ ಅಧಿಕಾರಿಗಳು ತಮ್ಮ ತಮ್ಮ ಕೆಲಸಗಳಲ್ಲಿ ಹೆಚ್ಚು ಸಮಯ ಕಳೆಯುವುದಕ್ಕಿಂತ ವಕೀಲರ ಕಚೇರಿಗಳಲ್ಲೇ ಹೆಚ್ಚು ಸಮಯ ಕಳೆಯುತ್ತಿರುವುದನ್ನು ನ್ಯಾಯಪೀಠ ಗಂಭೀರವಾಗಿ ಪರಿಗಣಿಸಿತು.

ರೋಹಿಣಿ ಸಿಂಧೂರಿಯ ತಪ್ಪು ಕೆಲಸಗಳ ಕುರಿತು ನನ್ನ ಕಕ್ಷಿದಾರೆ ರೂಪಾ ವಿಷಲ್ ಬ್ಲೋಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ರೂಪಾ ಪರ ವಕೀಲರು ವಾದಿಸಿದರು.

ಅದಕ್ಕೆ ಪ್ರತಿಯಾಗಿ, “ನಿಮ್ಮ ಕಕ್ಷಿದಾರರು ತಮ್ಮ ಕುಂದುಕೊರತೆಯನ್ನು ಇಲಾಖೆಯೊಳಗೆ ಮಂಡಿಸಲು ಸಾಧ್ಯವಾಗಲಿಲ್ಲವೆ?” ಎಂದು ನ್ಯಾಯಪೀಠ ಪ್ರಶ್ನಿಸಿತು.

“ನೀವು ಆಕೆಯ ಮೇಲೆ ಒಂದರ ನಂತರ ಒಂದರಂತೆ ಆರೋಪ ಮಾಡಲು ಸಿದ್ಧರಾಗಿದ್ದಿರಿ. ಇದು ಮಾನಹಾನಿಯಲ್ಲವೆ? ನಿಮಗೆ ಅಪರಾಧ ನ್ಯಾಯ ವ್ಯವಸ್ಥೆಯ ಎಲ್ಲ ಆಯಾಮಗಳು ತಿಳಿದಿದ್ದರೂ, ಇದನ್ನು ಮಾಡಿದ್ದೀರಿ” ಎಂದು ನ್ಯಾಯಪೀಠ ರೂಪಾ ವಕೀಲರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ಆದರೆ, ರಾಜಿಗೆ ನಿರಾಕರಿಸಿದ ರೋಹಿಣಿ ಸಿಂಧೂರಿ ಪರ ವಕೀಲ ಲೂತ್ರಾ, ನನ್ನ ಕಕ್ಷಿದಾರರ ವಿಶ್ವಾಸಾರ್ಹತೆಗೆ ಭಾರಿ ಪ್ರಮಾಣದ ಹಾನಿಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಆಗ ಈ ವಿಷಯದ ಕುರಿತು ರಾಜಿ ಮಾಡಿಕೊಳ್ಳಲು ಮತ್ತೊಂದು ಪ್ರಯತ್ನ ನಡೆಸಿ ಎಂದು ನ್ಯಾಯಾಲಯ ಉಭಯತ್ರಯರಿಗೆ ಸಲಹೆ ನೀಡಿತು.

ಈ ವಿಷಯದಲ್ಲಿ ನ್ಯಾಯಾಲಯ ನಿರ್ಣಯಿಸಿದರೆ, ಉಭಯತ್ರಯರಿಗೆ ಏನು ಒಳ್ಳೆಯದಾಗಬಹುದು ಎಂಬ ಬಗ್ಗೆ ನ್ಯಾಯಪೀಠ ಪ್ರಶ್ನಿಸಿತು.

“ಇಬ್ಬರೂ ನ್ಯಾಯಾಲಯದಲ್ಲಿದ್ದಾರೆ. ದಯವಿಟ್ಟು ಏನು ಮಾಡಬೇಕು ಎಂಬ ಕುರಿತು ಸೂಚನೆಗಳನ್ನು ಪಡೆಯಿರಿ” ಎಂದು ಉಭಯತ್ರಯರ ವಕೀಲರಿಗೆ ನ್ಯಾಯಪೀಠ ಸೂಚಿಸಿತು ಹಾಗೂ ಪರಸ್ಪರ ಸಹಮತದೊಂದಿಗೆ ರಾಜಿ ಮಾಡಿಕೊಳ್ಳಲು ಸಮಯಾವಕಾಶ ನೀಡಿತು.

ಆದರೆ, ಉಭಯತ್ರಯರು ರಾಜಿಯಾಗಲು ಅಸಾಧ್ಯವಾಗಿರುವುದರಿಂದ, ನಾವು ನಮ್ಮ ಅರ್ಜಿಯನ್ನು ವಾಪಸು ಪಡೆಯುತ್ತೇವೆ ಎಂದು ರೂಪಾ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ರೂಪಾ ತಮ್ಮ ಅರ್ಜಿಯನ್ನು ವಾಪಸು ಪಡೆಯಲು ನ್ಯಾಯಪೀಠ ಅವಕಾಶ ನೀಡಿತು.

ಡಿಸೆಂಬರ್ 2023ರಲ್ಲಿ ನಿಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ತೆಗೆದು ಹಾಕಿ ಎಂದು ಐಪಿಎಸ್ ಅಧಿಕಾರಿ ಡಿ.ರೂಪಾರಿಗೆ ನ್ಯಾಯಾಲಯ ಸೂಚಿಸಿತ್ತು. ತಮ್ಮ ವಿರುದ್ಧ ರೋಹಿಣಿ ಸಿಂಧೂರಿ ದಾಖಲಿಸಿರುವ ದೂರನ್ನು ವಜಾಗೊಳಿಸಬೇಕು ಎಂದು ಡಿ.ರೂಪಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿತ್ತು.

ರೋಹಿಣಿ ಸಿಂಧೂರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ, ಅವರ ಖಾಸಗಿ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ರೂಪಾ ಹಂಚಿಕೊಂಡಿದ್ದರಿಂದ, ಇಬ್ಬರು ಅಧಿಕಾರಿಗಳ ನಡುವೆ ಪರಸ್ಪರ ಸಾರ್ವಜನಿಕ ವಾಕ್ಸಮರ ನಡೆದಿತ್ತು.

ಇದರ ಬೆನ್ನಿಗೇ, ರೋಹಿಣಿ ಸಿಂಧೂರಿ ಅವರು ರೂಪಾ ವಿರುದ್ಧ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡಿದ್ದರು.

ಸೌಜನ್ಯ: deccanherald.com

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News