ಹತ್ರಾಸ್ ಕಾಲ್ತುಳಿತ ಪ್ರಕರಣ: ಮೃತದೇಹಗಳ ರಾಶಿ ನೋಡಿ ಹೃದಯಾಘಾತಕ್ಕೊಳಗಾಗಿ ಪೊಲೀಸ್ ಕಾನ್‌ಸ್ಟೇಬಲ್ ಮೃತ್ಯು

Update: 2024-07-03 09:25 GMT

Photo: PTI

ಹೊಸದಿಲ್ಲಿ: ಹತ್ರಾಸ್ ಕಾಲ್ತುಳಿತ ಪ್ರಕರಣದಲ್ಲಿ ಈವರೆಗೆ 121ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದು, ಇಟಾ ವೈದ್ಯಕೀಯ ಆಸ್ಪತ್ರೆಯಲ್ಲಿ ಇರಿಸಲಾಗಿದ್ದ ಮೃತ ದೇಹಗಳ ರಾಶಿಯನ್ನು ಕಂಡು ರವಿ ಯಾದವ್ (30) ಎಂಬ ಪೊಲೀಸ್ ಪೇದೆಯೊಬ್ಬರು ಹೃದಯಾಘಾತಕ್ಕೀಡಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಹತ್ರಾಸ್‌ನಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯೊಂದರಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ 100ಕ್ಕೂ ಹೆಚ್ಚು ಮಂದಿಯ ಮೃತದೇಹಗಳನ್ನು ಇಟಾ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇಟಾ ಜಿಲ್ಲೆಯ ಅವಘರ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಕಾನ್‌ಸ್ಟೆಬಲ್ ರವಿ ಅವರು ಆಸ್ಪತ್ರೆಯಲ್ಲಿ ಮೃತದೇಹಗಳ ರಾಶಿ ಕಂಡು ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

ತ್ವರಿತ ಸ್ಪಂದನೆ ತಂಡಕ್ಕೆ ನಿಯೋಜನೆಗೊಂಡಿದ್ದ ರವಿ ಯಾದವ್ ಅವರನ್ನು ಮೃತದೇಹಗಳ ಮೇಲುಸ್ತುವಾರಿ ವಹಿಸಲು ಇಟಾ ವೈದ್ಯಕೀಯ ಆಸ್ಪತ್ರೆಗೆ ಕಳಿಸಲಾಗಿತ್ತು. 

"ಮಹಿಳೆಯರು ಸೇರಿದಂತೆ ಅಷ್ಟೊಂದು ಮಂದಿಯ ಹೆಣದ ರಾಶಿಗಳನ್ನು ಕಂಡು ಅವರು ಆಘಾತಕ್ಕೀಡಾದರು. ನಾವು ನಮ್ಮ ಕೆಲಸ ನಿರ್ವಹಿಸಲು ತೆರಳುತ್ತಿದ್ದಾಗ, ಅವರು ದಿಢೀರನೆ ನೆಲದ ಮೇಲೆ ಕುಸಿದು ಬಿದ್ದರು. ನಾವು ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿದೆವಾದರೂ, ರವಿ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟರು. ಅವರು ಹೆಣಗಳ ರಾಶಿಯನ್ನು ಕಂಡು ತೀವ್ರ ಆಘಾತಕ್ಕೀಡಾಗಿರುವುದರಿಂದ ಹೃದಯಾಘಾತ ಸಂಭವಿಸಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ" ಎಂದು ಮೃತ ಪೊಲೀಸ್ ಪೇದೆ ರವಿ ಯಾದವ್ ಅವರ ಸಹೋದ್ಯೋಗಿ ಲಲಿತ್ ಚೌಧರಿ ತಿಳಿಸಿದ್ದಾರೆ.

ಭೋಲೆ ಬಾಬಾ ಎಂಬ ಪ್ರವಚನಕಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಜನರು ಹೊರ ಬರುವಾಗ ಈ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಘಟನೆಯ ನಂತರ ಪ್ರವಚನಕಾರ ಭೋಲೆ ಬಾಬಾ ತಲೆ ಮರೆಸಿಕೊಂಡಿದ್ದು, ಸಭೆಯ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಭೋಲೆ ಬಾಬಾಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News