ಆಗಸ್ಟ್ 15, 1947ರಷ್ಟೇ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನವೂ ಕೂಡಾ ಮಹತ್ವವಾದುದು: ತಮಿಳುನಾಡು ರಾಜ್ಯಪಾಲ
ಚೆನ್ನೈ: ಆಗಸ್ಟ್ 15, 1947ರಷ್ಟೇ ಅಯೋಧ‍್ಯೆಯಲ್ಲಿನ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನವೂ ಮಹತ್ವದ್ದಾಗಿದ್ದು, ರಾಮ ರಾಜ್ಯ ಹಾಗೂ ದೇಶದ ಅಭಿವೃದ್ಧಿಯ ದಿಕ್ಕಿನಲ್ಲಿ ಹೊಸ ಮನ್ವಂತರದ ಯುಗವಾಗಿದೆ ಎಂದು ಸೋಮವಾರ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಬಣ್ಣಿಸಿದ್ದಾರೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಭವ್ಯ ಕಾರ್ಯಕ್ರಮವನ್ನು ಜೀವನದಲ್ಲಿ ಒಮ್ಮೆ ದೊರೆಯುವ ಅನುಭವವೆಂದು ಬಣ್ಣಿಸಿರುವ ಅವರು, “ರಾಮ ಲಲ್ಲಾ ಆಗಮನವು ಹೊಸ ಯುಗದ ಮನ್ವಂತರಕ್ಕೆ ನಾಂದಿ ಹಾಡಿದೆ ಹಾಗೂ ಆಗಸ್ಟ್ 15, 1947ರಲ್ಲಿ ನಾವು ವಿದೇಶಿಯರಿಂದ ಸ್ವತಂತ್ರಗೊಂಡಷ್ಟೇ ಮಹತ್ವದ ದಿನ ಇದಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
“ಚೆನ್ನಾಯಿಲ್ ಅಯೋಧ್ಯಾ” ಎಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮನ್ನು ವಸಾಹತೀಕರಣಗೊಳಿಸಿದ ಅನ್ಯ ಜೀವಿಗಳು ಇಲ್ಲಿಂದ ತೆರಳಿದ್ದಾರೆ ಎಂದೂ ಅವರು ಹೇಳಿದ್ದಾರೆ.
“ರಾಮ ರಾಜ್ಯಕ್ಕೆ ನಾಂದಿ ಹಾಡಿದ ಈ ದಿನವು ನಮ್ಮೆಲ್ಲರ ಬಹು ದಿನದ ಕನಸಾಗಿದ್ದು, ಈ ಕನಸನ್ನು ಭಾರತೀಯ ಸಂವಿಧಾನದಲ್ಲಿ ಮಹತ್ವವಾಗಿ ಚಿತ್ರಿಸಲಾಗಿದೆ. ಬ್ರಿಟಿಷರು ಭಾರತವನ್ನು ತೊರೆದಾಗ ನಮಗೆಲ್ಲರಿಗೂ ರಾಮ ರಾಜ್ಯವನ್ನು ಕಟ್ಟುವ ಕನಸಿತ್ತು. ಈ ಕನಸನ್ನು ಮನಸ್ಸಿನಲ್ಲಿಟ್ಟುಕೊಂಡೇ ಮೂಲ ಭಾರತೀಯ ಸಂವಿಧಾನದ ಚಿತ್ರಗಳನ್ನು ಶ‍್ರೀ ರಾಮ ಪಟ್ಟಾಭಿಷೇಕ ಚಿತ್ರದೊಂದಿಗೆ ಪ್ರಾರಂಭಿಸಲಾಗಿತ್ತು" ಎಂದು ರಾಜ್ಯಪಾಲ ಆರ್.ಎನ್.ರವಿ ಹೇಳಿದ್ದಾರೆ.