ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಿಂದ ದೂರ ಉಳಿದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ

Update: 2024-01-22 06:39 GMT

ಎಲ್.ಕೆ.ಅಡ್ವಾಣಿ (PTI)

ಹೊಸದಿಲ್ಲಿ: ತೀವ್ರ ಚಳಿಯ ವಾತಾವರಣದ ಕಾರಣಕ್ಕೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅಯೋಧ‍್ಯೆಯಲ್ಲಿ ನಡೆಯುತ್ತಿರುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎಂದು ವರದಿಯಾಗಿದೆ.

ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಶಿ ತಮ್ಮ ಆರೋಗ್ಯ ಹಾಗೂ ವಯಸ್ಸಿನ ಕಾರಣಕ್ಕೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ಸಾಧ್ಯತೆ ಇದೆ ಎಂದು ಶ‍್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳೆದ ತಿಂಗಳು ಹೇಳಿತ್ತು.

ಕಳೆದ ತಿಂಗಳು ಸುದ್ದಿಗಾರರೊಂದಿಗೆ ಮಾತನಾಡಿದ್ದ ಶ‍್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, “ಅವರಿಬ್ಬರಿಗೂ ವಯಸ್ಸಾಗಿರುವುದನ್ನು ಪರಿಗಣಿಸಿ, ಅವರಿಬ್ಬರಿಗೂ ಕಾರ್ಯಕ್ರಮಕ್ಕೆ ಆಗಮಿಸದಂತೆ ಮನವಿ ಮಾಡಲಾಗಿದ್ದು, ಆ ಮನವಿಯನ್ನು ಅವರಿಬ್ಬರೂ ಪುರಸ್ಕರಿಸಿದ್ದಾರೆ” ಎಂದು ಹೇಳಿದ್ದರು. ಇದರ ಬೆನ್ನಿಗೇ ವಿಶ್ವ ಹಿಂದೂ ಪರಿಷತ್ ನಾಯಕರೂ ಆದ ಅವರು, ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅಡ್ವಾಣಿ ಭಾಗವಹಿಸಲಿದ್ದಾರೆ ಎಂದು ಜನವರಿಯಲ್ಲಿ ಹೇಳಿದ್ದರು.

ಆದರೆ, ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಡ್ವಾಣಿ ಅವರಿಗೆ ಅಗತ್ಯವಿರುವ ವೈದ್ಯಕೀಯ ಸೌಕರ್ಯದ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದು ವಿಶ‍್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದರು. ಇದಕ್ಕೂ ಮುನ್ನ, ಡಿಸೆಂಬರ್ ತಿಂಗಳಲ್ಲಿ ಅಡ್ವಾಣಿ ಹಾಗೂ ಜೋಶಿ ಅವರಿಗೆ ವಿಶ್ವ ಹಿಂದೂ ಪರಿಷತ್ ಆಯೋಧ್ಯೆಯಲ್ಲಿನ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ನೀಡಿತ್ತು.

ಶ‍್ರೀ ರಾಮ ಜನ್ಮಭೂಮಿ ಚಳವಳಿಯಲ್ಲಿ ತಮ್ಮ ಸಹೋದ್ಯೋಗಿಯಾದ ಮುರಳಿ ಮನೋಹರ ಜೋಶಿ ಹಾಗೂ ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ದಿ. ಅಶೋ‍ಕ್ ಸಿಂಘಾಲ್ ಅವರೊಂದಿಗೆ ಎಲ್.ಕೆ.ಅಡ್ವಾಣಿ ಮುಂಚೂಣಿಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News