ಮಹಾರಾಷ್ಟ್ರ | ಬಾಂದ್ರಾ ವೆಸ್ಟ್ ; ವಿಧಾನಸಭಾ ಚುನಾವಣೆಯ ಮೇಲೆ ಬಾಬಾ ಸಿದ್ದೀಕಿ ಹತ್ಯೆಯ ಕರಿ ನೆರಳು
ಮುಂಬೈ : ಬಾಂದ್ರಾ ವೆಸ್ಟ್ ವಿಧಾನಸಭಾ ಚುನಾವಣೆಯ ಮೇಲೆ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದ ಕರಿ ನೆರಳು ಚಾಚಿದ್ದು, ಬೆಂಬಲಿಗರ ನಿಷ್ಠೆಯಲ್ಲಿನ ಪಲ್ಲಟದಿಂದ ಚುನಾವಣಾ ಫಲಿತಾಂಶ ಕುತೂಹಲ ಕೆರಳಿಸಿದೆ ಎಂದು ವರದಿಯಾಗಿದೆ.
2019ರವರೆಗೂ ಬಾಂದ್ರಾ ವೆಸ್ಟ್ ವಿಧಾನಸಭಾ ಕ್ಷೇತ್ರವು ಅವಿಭಜಿತ ಶಿವಸೇನೆಯ ಭದ್ರಕೋಟೆಯಾಗಿತ್ತು. ಆದರೆ, ಈ ಬಾರಿ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವುದರಿಂದ ಫಲಿತಾಂಶವನ್ನು ಅಂದಾಜಿಸುವುದು ಕ್ಲಿಷ್ಟಕರವಾಗಿ ಪರಿಣಮಿಸಿದೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಾಬಾ ಸಿದ್ದೀಕಿ ಅವರ ಪುತ್ರ ಝೀಶನ್ ಅಲಿ, ತಮ್ಮ ಸಮೀಪದ ಪ್ರತಿಸ್ಪರ್ಧಿ ಅವಿಭಜಿತ ಶಿವಸೇನೆಯ ವಿಶ್ವನಾಥ್ ಮಹದೇಶ್ವರ್ ಅವರನ್ನು ಪರಾಭವಗೊಳಿಸಿದ್ದರು.
ಅಕ್ಟೋಬರ್ ತಿಂಗಳ ಆರಂಭದಲ್ಲಿ ಹತ್ಯೆಗೀಡಾಗಿದ್ದ ಮಾಜಿ ಸಚಿವ, ಎನ್ಸಿಪಿ ನಾಯಕ ಹಾಗೂ ತಮ್ಮ ತಂದೆ ಬಾಬಾ ಸಿದ್ದೀಕಿ ಸಾವಿನ ಅನುಕಂಪದಿಂದ ಝೀಶನ್ ಸಿದ್ದೀಕಿಗೆ ಕೊಂಚ ಮುನ್ನಡೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ.
ಆದರೆ, ಬಾಂದ್ರಾ ವೆಸ್ಟ್ ಕ್ಷೇತ್ರದಲ್ಲಿ ಮುಸ್ಲಿಂ ಜನಸಂಖ್ಯೆ ಗಮನಾರ್ಹವಾಗಿರುವುದರಿಂದ, ಅವರು ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಸೇರ್ಪಡೆಯಾಗಿರುವ ಝೀಶನ್ ಅಲಿ ವಿರುದ್ಧ ಮತ ಚಲಾಯಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಅಜಿತ್ ಪವಾರ್ ನೇತೃತ್ವದ ಎನ್ಸಿಪಿ, ಬಿಜೆಪಿ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯನ್ನು ಒಳಗೊಂಡಿರುವ ಮಹಾಯುತಿ ಮೈತ್ರಿಕೂಟದ ಅಂಗಪಕ್ಷವಾಗಿದೆ.
ಬಾಂದ್ರಾ ವೆಸ್ಟ್ ಕ್ಷೇತ್ರದ ಮಾಜಿ ಶಿವಸೇನೆ ಶಾಸಕಿ ತೃಪ್ತಿ ಸಾವಂತ್ ಅವರನ್ನು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಣಕ್ಕಿಳಿಸಿದೆ. ಶಿವಸೇನೆ (ಉದ್ಧವ್ ಬಣ) ಪಕ್ಷದ ನಾಯಕ ಆದಿತ್ಯ ಠಾಕ್ರೆ ಅವರ ಸಹೋದರ ಸಂಬಂಧಿ ಹಾಗೂ ಪಕ್ಷದ ಯುವ ಘಟಕವಾದ ಯುವ ಸೇನೆಯ ಕಾರ್ಯದರ್ಶಿ ವರುಣ್ ಸರ್ದೇಸಾಯಿ ಅವರನ್ನು ಕಣಕ್ಕಿಳಿಸಿದೆ.
ಬಾಂದ್ರಾ ವೆಸ್ಟ್ ವಿಧಾನಸಭಾ ಕ್ಷೇತ್ರವು ಠಾಕ್ರೆ ಕುಟುಂಬದ ನಿವಾಸ ‘ಮಾತೋಶ್ರೀ’ಯ ತವರಾಗಿರುವುದರಿಂದ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಗೆ ಈ ಕ್ಷೇತ್ರ ಪ್ರತಿಷ್ಠಿತವಾಗಿ ಪರಿಣಿಸಿದೆ. ವಿಶಾಲವಾಗಿ ಹರಡಿಕೊಂಡಿರುವ ಈ ಕ್ಷೇತ್ರವು ಕೊಳಗೇರಿಗಳು, ಸರಕಾರಿ ವಸತಿ ಕಾಲನಿ, ಒಂದು ಸಮಯದಲ್ಲಿ ಗಣ್ಯ ಮರಾಠಿ ಲೇಖಕರು ವಾಸಿಸುತ್ತಿದ್ದ ಕಾಲಾ ನಗರ್ ಸೇರಿದಂತೆ ವಿವಿಧ ವಸತಿ ಪ್ರದೇಶಗಳು, ನೂತನ ವಸತಿ ಸಮುಚ್ಛಯಗಳು ಹಾಗೂ ಬಾಂದ್ರಾ ಕುರ್ಲಾ ಸಂಕೀರ್ಣವನ್ನು ಒಳಗೊಂಡಿದೆ.
ಈ ಕ್ಷೇತ್ರದಲ್ಲಿ ಒಟ್ಟು 2,48,345 ಮಂದಿ ನೋಂದಾಯಿತ ಮತದಾರರಿದ್ದು, ಈ ಪೈಕಿ 1,10,700 ಮಂದಿ ಮಹಿಳೆಯರಾಗಿದ್ದಾರೆ.
ನವೆಂಬರ್ 20ರಂದು ಮಹಾರಾಷ್ಟ್ರದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.