ಬಾಬಾ ಸಿದ್ದೀಕಿ ಹತ್ಯೆ ಪ್ರಕರಣ | ಮತ್ತೊಬ್ಬ ಆರೋಪಿಯ ಬಂಧನ
ಮುಂಬೈ: ಮಾಜಿ ಸಚಿವ ಹಾಗೂ ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದಲ್ಲಿ ಬುಧವಾರ 23 ವರ್ಷದ ಮತ್ತೊಬ್ಬ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಪುಣೆ ನಗರದ ಕರ್ವೆನಗರ್ ಪ್ರದೇಶದ ನಿವಾಸಿ ಗೌರವ್ ವಿಲಾಸ್ ಅಪುನೆ ಎಂದು ಗುರುತಿಸಲಾಗಿದ್ದು, ಈ ಪ್ರಕರಣದಲ್ಲಿ ಬಂಧಿತನಾಗಿರುವ 16ನೇ ಆರೋಪಿಯಾಗಿದ್ದಾನೆ.
ಆರೋಪಿ ಗೌರವ್ ವಿಲಾಸ್ ಅಪುನೆಯನ್ನು ನ್ಯಾಯಾಲಯವೊಂದು ನವೆಂಬರ್ 9ರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಈಗಾಗಲೇ ಬಂಧಿತರಾಗಿರುವ ಕೆಲವು ಆರೋಪಿಗಳಿಂದ ಸಿದ್ದೀಕಿ ಮೇಲಿನ ದಾಳಿಯ ಪಿತೂರಿಯಲ್ಲಿ ಗೌರವ್ ವಿಲಾಸ್ ಅಪುನೆ ಭಾಗಿಯಾಗಿದ್ದ ಎಂಬ ಸಂಗತಿ ತಿಳಿದು ಬಂದಿರುವುದರಿಂದ, ಮುಂಬೈ ಅಪರಾಧ ವಿಭಾಗದ ಪೊಲೀಸರು ಆತನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಕೆಲವು ಆರೋಪಿಗಳು ಅಪುನೆಗೆ ಶಸ್ತ್ರಾಸ್ತ್ರಗಳ ಬಳಕೆಯ ಕುರಿತು ತರಬೇತಿ ನೀಡಿದ್ದರು. ಈ ಪಿತೂರಿಯಲ್ಲಿ ಭಾಗಿಯಾಗಿರುವುದಕ್ಕೆ ಆತನಿಗೆ ಭಾರಿ ಪ್ರಮಾಣದ ಹಣ ನೀಡುವ ಭರವಸೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 12ರಂದು ತಮ್ಮ ಪುತ್ರ ಝೀಶನ್ ಸಿದ್ದೀಕಿ ಕಚೇರಿ ಇರುವ ಮುಂಬೈನ ಬಾಂದ್ರಾದಲ್ಲಿ ಮೂವರು ಬಂದೂಕುಧಾರಿಗಳ ಗುಂಡಿನ ದಾಳಿಗೆ ಬಾಬಾ ಸಿದ್ದೀಕಿ ಬಲಿಯಾಗಿದ್ದರು. ಈ ಹತ್ಯೆಯ ಹಿಂದೆ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ ಹಾಗೂ ಆತನ ಸಹೋದರ ಅನ್ಮೋಲ್ ಬಿಷ್ಣೋಯಿ ಕೈವಾಡವಿದೆ ಎಂದು ಆರೋಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.