ಬ್ಯಾಡ್ಮಿಂಟನ್ ಏಶ್ಯ ಚಾಂಪಿಯನ್ ಶಿಪ್ | ಸಿಂಧು ಬಳಗಕ್ಕೆ ವಿಶ್ವ ಶ್ರೇಷ್ಠ ಆಟಗಾರರಿಂದ ಕಠಿಣ ಸವಾಲು

Update: 2024-04-08 15:55 GMT

ಸಿಂಧು | PC : PTI 

ಬೀಜಿಂಗ್ : ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಮಂಗಳವಾರ ಆರಂಭವಾಗಲಿರುವ ಬ್ಯಾಡ್ಮಿಂಟನ್ ಏಶ್ಯ ಚಾಂಪಿಯನ್‌ಶಿಪ್‌ನಲ್ಲಿ ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಪಿ.ವಿ. ಸಿಂಧು ಸಹಿತ ಭಾರತದ ಸ್ಟಾರ್ ಶಟ್ಲರ್ ಗಳು ವಿಶ್ವದ ಕೆಲವು ಶ್ರೇಷ್ಠ ಆಟಗಾರರಿಂದ ಕಠಿಣ ಸವಾಲನ್ನು ಎದುರಿಸಲಿದ್ದಾರೆ.

ವಿಶ್ವದ ನಂ.1 ಜೋಡಿ ಹಾಗೂ ಹಾಲಿ ಚಾಂಪಿಯನ್ಗಳಾದ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕೊನೆಯ ನಿಮಿಷದಲ್ಲಿ ಚಾಂಪಿಯನ್ ಶಿಪ್ ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸಿಂಗಲ್ಸ್ ಸ್ಟಾರ್ ಗಳ ಮೇಲೆ ಒತ್ತಡ ಹೆಚ್ಚಾಗಿದೆ.

ಈ ಚಾಂಪಿಯನ್ಶಿಪ್ ಒಲಿಂಪಿಕ್ಸ್ ಅರ್ಹತಾ ರ್ಯಾಂಕಿಂಗ್ ಪಾಯಿಂಟ್ಸ್ ನೀಡುವ ಕೊನೆಯ ಪ್ರಮುಖ ಟೂರ್ನಿಯಾಗಿದೆ. ಈ ವಾರ ಕೆಲವು ಪ್ರಮುಖ ಶಟ್ಲರ್ ಗಳ ಮಧ್ಯೆ ಹೋರಾಟ ನಡೆಯುವ ನಿರೀಕ್ಷೆ ಇದೆ.

ಎರಡು ಬಾರಿ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರಾಗಿರುವ ಸಿಂಧು ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ನಲ್ಲಿ ಟೋಕಿಯೊ ಗೇಮ್ಸ್ ಚಾಂಪಿಯನ್ ಚೆನ್ ಯುಫಿ ಅವರನ್ನು ಮೂರು ಗೇಮ್ ಗಳ ಅಂತರದಿಂದ ಸೋಲಿಸಿ ಇದೀಗ ಮೊದಲಿನ ಲಯಕ್ಕೆ ಮರಳಿದಂತೆ ಕಂಡುಬಂದಿದ್ದಾರೆ.

ಗಾಯದಿಂದ ಚೇತರಿಸಿಕೊಂಡು ಸಕ್ರಿಯ ಬ್ಯಾಡ್ಮಿಂಟನ್ಗೆ ವಾಪಸಾಗಿದ್ದ ಸಿಂಧು ಅವರು ಸ್ಪೇನ್ ಮಾಸ್ಟರ್ಸ್ ಟೂರ್ನಿಯಲ್ಲಿ ಥಾಯ್ಲೆಂಡ್ನ ಸುಪನಿದ ಕಾಟೆಥೊಂಗ್ ವಿರುದ್ಧ ಅಲ್ಪ ಅಂತರದಿಂದ ಸೋತಾಗ ರಾಕೆಟನ್ನು ಎಸೆದು ಬೇಸರ ಹೊರಹಾಕಿದ್ದರು.

ಮಾಜಿ ವಿಶ್ವ ಚಾಂಪಿಯನ್ ಸಿಂಧು ವಿಶ್ವದ ನಂ.33ನೇ ಆಟಗಾರ್ತಿ ಮಲೇಶ್ಯದ ಗೊಯ್ ಜಿನ್ ವೀ ವಿರುದ್ಧ ಮೊದಲ ಸುತ್ತಿನ ಪಂದ್ಯದತ್ತ ಗಮನ ಹರಿಸಲು ಬಯಸಿದ್ದಾರೆ. ಸಿಂಧು ಮಲೇಶ್ಯ ಆಟಗಾರ್ತಿಯ ವಿರುದ್ಧ 4-1 ಗೆಲುವಿನ ದಾಖಲೆ ಹೊಂದಿದ್ದಾರೆ. ಈ ಪಂದ್ಯವನ್ನು ಜಯಿಸಿದರೆ 2ನೇ ಸುತ್ತಿನಲ್ಲಿ ಚೀನಾದ ಆರನೇ ಶ್ರೇಯಾಂಕದ ಹಾನ್ ಯುಇ ಅವರನ್ನು ಎದುರಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿರುವ ಇನ್ನೋರ್ವ ಆಟಗಾರ್ತಿ ಆಕರ್ಷಿ ಕಶ್ಯಪ್ ಮೊದಲ ಸುತ್ತಿನಲ್ಲಿ ಥಾಯ್ಲೆಂಡ್ ನ ಬುಸನನ್ ಒಂಗ್ಬಮ್ರುಂಗ್ಫಾನ್ ರನ್ನು ಎದುರಿಸಲಿದ್ದಾರೆ.

ಫ್ರೆಂಚ್ ಓಪನ್ ಹಾಗೂ ಅಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ ನಲ್ಲಿ ಸೆಮಿ ಫೈನಲ್ ತಲುಪಿ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬಹುತೇಕ ತನ್ನ ಸ್ಥಾನ ಖಚಿತಪಡಿಸಿಕೊಂಡಿರುವ ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ನ ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಚೀನಾದ ಆಟಗಾರ ಶಿ ಯು ಕ್ಯೂರನ್ನು ಎದುರಿಸಲಿದ್ದಾರೆ.

ಲಕ್ಷ್ಯ ಸೇನ್ ಏಶ್ಯನ್ ಗೇಮ್ಸ್ ನಲ್ಲಿನ ಪ್ರದರ್ಶನದಿಂದ ಸ್ಫೂರ್ತಿ ಪಡೆಯಲಿದ್ದಾರೆ. ಏಶ್ಯನ್ ಗೇಮ್ಸ್ ನ ಟೀಮ್ ಚಾಂಪಿಯನ್ಶಿಪ್ ನಲ್ಲಿ ಸೇನ್ ಅವರು ಚೀನಾದ ಆಟಗಾರನನ್ನು ಸೋಲಿಸಿದ್ದರು.

ಏಳನೇ ಶ್ರೇಯಾಂಕದ ಹಾಗೂ 2023ರ ವಿಶ್ವ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ಜಯಿಸಿರುವ ಎಚ್.ಎಸ್.ಪ್ರಣಯ್ ಚೀನಾದ ಲು ಗುಯಾಂಗ್ ಝುರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಪ್ರಣಯ್ ಈ ವರ್ಷ ಉತ್ತಮ ಫಾರ್ಮ್ನಲ್ಲಿಲ್ಲ. ಚೀನಾದ ಆಟಗಾರರ ಎದುರು ಮೂರು ಬಾರಿ ಸೋತಿರುವ ಪ್ರಣಯ್ ಈ ಸಲ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಬಸ್ ತಪ್ಪಿಸಿಕೊಂಡಿರುವ ವಿಶ್ವದ ನಂ.27ನೇ ಆಟಗಾರ ಕೆ.ಶ್ರೀಕಾಂತ್ ವಿಶ್ವದ ನಂ.3ನೇ ಆಟಗಾರ ಅಂಥೋನಿ ಜಿಂಟಿಂಗ್ರ ಸವಾಲನ್ನು ಎದುರಿಸಲಿದ್ದಾರೆ. ಜಿಂಟಿಂಗ್ ಈ ವರ್ಷ ಆಲ್ ಇಂಗ್ಲೆಂಡ್ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ತಲುಪಿದ್ದರು.

ಭಾರತದ ಯುವ ಶಟ್ಲರ್ ಪ್ರಿಯಾಂಶು ರಾಜಾವತ್ ತನ್ನ ಮೊದಲ ಸುತ್ತಿನಲ್ಲಿ ಮಲೇಶ್ಯದ ಲೀ ಝಿ ಜಿಯಾರನ್ನು ಎದುರಿಸಲಿದ್ದಾರೆ.

ಸಾತ್ವಿಕ್-ಚಿರಾಗ್ ಅವರ ಅನುಪಸ್ಥಿತಿಯಲ್ಲಿ ಭಾರತದ ಜೋಡಿ ಎಂ.ಆರ್. ಅರ್ಜುನ್ ಹಾಗೂ ಧ್ರುವ ಕಪಿಲಾ ಅವರು ಚೀನಾದ 7ನೇ ಶ್ರೇಯಾಂಕದ ಲಿಯು ಯು ಚೆನ್ ಹಾಗೂ ಕ್ಸುಯಾನ್ ಯಿ ಅವರನ್ನು ಎದುರಿಸಲಿದ್ದಾರೆ.

ತನಿಶಾ ಕ್ರಾಸ್ಟೊ ಹಾಗೂ ಅಶ್ವಿನಿ ಪೊನ್ನಪ್ಪ ಇಂಡೋನೇಶ್ಯದ ಫೆಬ್ರಿಯಾನ ದ್ವಿಪುಜಿ ಕುಸುಮಾ ಹಾಗೂ ಅಮಲ್ಲಿಯಾ ಪೃಥ್ವಿ ಅವರನ್ನು ಎದುರಿಸಲಿದ್ದಾರೆ. ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅವರು ಚೀನಾದ 4ನೇ ಶ್ರೇಯಾಂಕದ ಲಿಯು ಶೆಂಗ್ ಹಾಗೂ ಟಾನ್ ನಿಂಗ್ರನ್ನು ಮುಖಾಮುಖಿಯಾಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News