ಕೋಸ್ಟ್ ಗಾರ್ಡ್ ಕುರಿತ ಗೌಪ್ಯ ಮಾಹಿತಿ ದಿನಕ್ಕೆ 200 ರೂ.ಗೆ ಪಾಕ್ ಏಜೆಂಟ್ ಗೆ ರವಾನೆ : ಗುಜರಾತ್ ನ ದೀಪೇಶ್ ಗೋಹಿಲ್ ಬಂಧನ
ಅಹಮದಾಬಾದ್ : ಭಾರತೀಯ ಕೋಸ್ಟ್ ಗಾರ್ಡ್ ಹಡಗುಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಭಯೋತ್ಪಾದನಾ ನಿಗ್ರಹ ದಳದ(ಎಟಿಎಸ್) ಗುಜರಾತ್ ಘಟಕವು ಓಖಾ ಮೂಲದ ಗುತ್ತಿಗೆ ಕಾರ್ಮಿಕನೋರ್ವನನ್ನು ಬಂಧಿಸಿದೆ.
ದೀಪೇಶ್ ಗೋಹಿಲ್ ಬಂಧಿತ ಆರೋಪಿ. ಓಖಾ ಬಂದರಿನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಈತ ಫೇಸ್ ಬುಕ್ ಮೂಲಕ ಪರಿಚಯಸ್ಥನಾದ ಪಾಕಿಸ್ತಾನದ ಏಜೆಂಟ್ ಜೊತೆ ಸಂಪರ್ಕದಲ್ಲಿದ್ದ. ದೀಪೇಶ್ ಸೂಕ್ಷ್ಮ ಮಾಹಿತಿ ರವಾನಿಸಿದ್ದಕ್ಕೆ ಪಾಕ್ ಏಜೆಂಟ್ ನಿಂದ ದಿನಕ್ಕೆ 200ರೂ. ಪಡೆಯುತ್ತಿದ್ದ ಮತ್ತು ಈವೆರೆಗೆ ಒಟ್ಟು 42,000ರೂ. ಪಡೆದಿದ್ದಾನೆ.
ಪಾಕಿಸ್ತಾನದ ಏಜೆಂಟ್ ತನ್ನನ್ನು ‘ಸಹಿಮಾ’ ಎಂದು ಪರಿಚಯಿಸಿಕೊಂಡು ಫೇಸ್ಬುಕ್ ಮತ್ತು ವಾಟ್ಸಾಪ್ ನಲ್ಲಿ ದೀಪೇಶ್ ಜೊತೆ ಸಂಪರ್ಕದಲ್ಲಿದ್ದ. ಓಖಾ ಬಂದರಿನಲ್ಲಿರುವ ಕೋಸ್ಟ್ ಗಾರ್ಡ್ ಬೋಟ್ ನ ಹೆಸರು ಮತ್ತು ಸಂಖ್ಯೆಯನ್ನು ದೀಪೇಶ್ ಏಜೆಂಟ್ ಜೊತೆ ಹಂಚಿಕೊಂಡಿದ್ದ ಎಂದು ಹೇಳಲಾಗಿದೆ.
ಗುಜರಾತ್ ಎಟಿಎಸ್ ಅಧಿಕಾರಿ ಕೆ ಸಿದ್ಧಾರ್ಥ್ ಈ ಕುರಿತು ಪ್ರತಿಕ್ರಿಯಿಸಿದ್ದು, ಓಖಾ ಮೂಲದ ವ್ಯಕ್ತಿಯೊಬ್ಬ ಕೋಸ್ಟ್ ಗಾರ್ಡ್ ಬೋಟ್ ಕುರಿತು ಪಾಕಿಸ್ತಾನದ ನೌಕಾಪಡೆ ಮತ್ತು ಐಎಸ್ಐ ಏಜೆಂಟ್ನೊಂದಿಗೆ ವಾಟ್ಸಾಪ್ ಮೂಲಕ ವಿವರಗಳನ್ನು ಹಂಚಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿಯನ್ನು ನಾವು ಸ್ವೀಕರಿಸಿದ್ದೇವೆ. ಈ ಕುರಿತ ತನಿಖೆಯ ನಂತರ ನಾವು ಓಖಾ ನಿವಾಸಿ ದೀಪೇಶ್ ಗೋಹಿಲ್ ಎಂಬಾತನನ್ನು ಬಂಧಿಸಿದ್ದೇವೆ. ಪಾಕಿಸ್ತಾನದ ಗೂಢಚಾರಿಗೆ ಮಾಹಿತಿ ನೀಡಿದ್ದಕ್ಕೆ ಆತ ದಿನಕ್ಕೆ 200ರೂ. ಪಡೆಯುತ್ತಿದ್ದ. ಆತನಲ್ಲಿ ಬ್ಯಾಂಕ್ ಖಾತೆ ಇಲ್ಲದ ಕಾರಣ ತನ್ನ ಸ್ನೇಹಿತನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ವೆಲ್ಡಿಂಗ್ ಕೆಲಸಕ್ಕಿರುವ ಹಣ ಎಂದು ಹೇಳಿ ತನ್ನ ಸ್ನೇಹಿತನಿಂದ ನಗದು ರೂಪದಲ್ಲಿ ಹಣ ಪಡೆದಿದ್ದಾನೆ. ಇದೇ ರೀತಿ ಆತ ಒಟ್ಟು 42,000ರೂ. ಹಣ ಪಡೆದಿದ್ದಾನೆ ಎಂದು ಹೇಳಿದ್ದಾರೆ.