ಧಾರ್ಮಿಕ ಏಕತೆಗೆ ಅಜ್ಮೀರ್ ದರ್ಗಾದ ಆಧ್ಯಾತ್ಮಿಕ ಮುಖಂಡ ಕರೆ
ಅಜ್ಮೀರ್ : ಇಂತಹ ವಿವಾದಗಳನ್ನು ಹುಟ್ಟು ಹಾಕುವುದು ಸರಿಯಲ್ಲ ಎಂದು ಅಜ್ಮೀರ್ ದರ್ಗಾದ ಆಧ್ಯಾತ್ಮಿಕ ಮುಖಂಡ ಸೈಯದ್ ಝೈನುಲ್ ಅಬೇದಿನ್ ಅಲಿ ಖಾನ್ ಹೇಳಿದ್ದಾರೆ.
ಅಜ್ಮೀರ್ ಶರೀಫ್ ದರ್ಗಾವನ್ನು ಶಿವ ದೇವಾಲಯದ ಮೇಲೆ ನಿರ್ಮಾಣ ಮಾಡಲಾಗಿದೆ ಎಂದು ಪ್ರತಿಪಾದಿಸಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ರಾಜಸ್ಥಾನ ನ್ಯಾಯಾಲಯ ನೋಟಿಸು ಜಾರಿ ಮಾಡಿರುವ ನಡುವೆ ಖಾನ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘‘ಇಂತಹ ವಿವಾದಗಳನ್ನು ಹುಟ್ಟು ಹಾಕುವುದು ಸರಿಯಲ್ಲ. ಇಲ್ಲಿರುವ ಜನಸಂಖ್ಯೆಯ ಬಹುಪಾಲು ಹಿಂದೂಗಳು. ದರ್ಗಾದ ಹೊರಗೆ ಕೂಡ ಹೆಚ್ಚಿನ ಅಂಗಡಿಗಳು ಹಿಂದೂಗಳದ್ದು. ಅವರು ತಮ್ಮ ಕೀಲಿ ಕೈಯನ್ನು ದರ್ಗಾದ ಹೊರಗೆ ಇಡುತ್ತಾರೆ ಹಾಗೂ ಅಂಗಡಿಗಳ ಬಾಗಿಲು ತೆರೆಯುತ್ತಾರೆ. ಇದು ಇಂದಿಗೂ ನಡೆದುಕೊಂಡು ಬಂದ ಸಂಪ್ರದಾಯ’’ ಎಂದು ಅವರು ಹೇಳಿದ್ದಾರೆ.
‘‘ಇಲ್ಲಿಗೆ ಎಲ್ಲಾ ಧರ್ಮದವರು ಬರುತ್ತಾರೆ. ಪ್ರಧಾನಿ, ಮುಖ್ಯಮಂತ್ರಿ, ರಾಜ್ಯಪಾಲ, ನಟರು ಕೂಡ ಇಲ್ಲಿಗೆ ಬರುತ್ತಾರೆ. ದೇಶದ ಪ್ರಧಾನಿ ಅವರ ಚಾದರವನ್ನು ಕೂಡ ಇಲ್ಲಿ ಅರ್ಪಿಸಲಾಗಿದೆ. ಇದಲ್ಲದೆ, ಇಂದ್ರೇಶ್ ಕುಮಾರ್ ಅವರ ಪರವಾಗಿ ಆರ್‌ಎಸ್‌ಎಸ್ ಕೂಡ ಇಲ್ಲಿ ಚಾದರ ಅರ್ಪಿಸಿದೆ. ಎಲ್ಲಾ ಜನರ ನಂಬಿಕೆಯು ಈ ದರ್ಗಾದೊಂದಿಗೆ ಬೆಸೆದುಕೊಂಡಿದೆ’’ ಎಂದು ಅವರು ಹೇಳಿದ್ದಾರೆ.
ಮಸೀದಿ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್‌ಐ) ಸಮೀಕ್ಷೆ ನಡೆಸಲು ಆಗಮಿಸಿದ ಹಿನ್ನೆಲೆಯಲ್ಲಿ ಸಂಭಲ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳಲ್ಲಿ ಅಮಾಯಕ ಜನರು ಸಾವನ್ನಪ್ಪುತ್ತಾರೆ ಎಂದಿದ್ದಾರೆ.