ಬಾಸ್ಮತಿ ಹೊರತುಪಡಿಸಿ ಇತರ ಅಕ್ಕಿ ರಫ್ತು ನಿಷೇಧ: ಕೇಂದ್ರ ಸರ್ಕಾರ
ಹೊಸದಿಲ್ಲಿ: ದೇಶದಿಂದ ಬಾಸ್ಮತಿ ಹೊರತುಪಡಿಸಿ ಉಳಿದ ಎಲ್ಲ ಬಗೆಯ ಅಕ್ಕಿ ರಫ್ತನ್ನು ತಕ್ಷಣದಿಂದ ನಿಷೇಧಿಸಿ ಕೇಂದ್ರ ಸರ್ಕಾರ ಗುರುವಾರ ಆದೇಶ ಹೊರಡಿಸಿರುವ ಬಗ್ಗೆ ವರದಿಯಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ಹೇರಳವಾಗಿ ಲಭ್ಯವಾಗಬೇಕು ಮತ್ತು ಬೆಲೆ ಏರಿಕೆಯ ಅಪಾಯವನ್ನು ತಡೆಯುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ ಎಲ್ಲ ನಗರಗಳಲ್ಲಿ ಅಕ್ಕಿಯ ಬೆಲೆ ಪ್ರತಿ ಕೆಜಿಗೆ 5 ರೂಪಾಯಿಯಷ್ಟು ಹೆಚ್ಚಳವಾಗಿದ್ದು, ಗುರುವಾರ ಮಾರಾಟ ಬೆಲೆ ಕೆಜಿಗೆ 35 ರೂಪಾಯಿ ತಲುಪಿತ್ತು.
ದೆಹಲಿಯಲ್ಲಿ ಅಕ್ಕಿ ದರ ಕೆ.ಜಿ.ಗೆ 39 ರೂಪಾಯಿ ಆಗಿದ್ದು, ವರ್ಷದ ಹಿಂದೆ ಈ ದರ 32 ರೂಪಾಯಿ ಇತ್ತು. "ಬೆಳ್ತಿಗೆ ಅಕ್ಕಿಯನ್ನು ಈ ಹಿಂದೆ ಇದ್ದ ಮುಕ್ತ ಪಟ್ಟಿಯಿಂದ ನಿಷೇಧಿತ ಪಟ್ಟಿಯ ವರ್ಗಕ್ಕೆ ತರಲಾಗಿದೆ" ಎಂದು ವಿದೇಶಾಂಗ ವ್ಯಾಪಾರ ವಿಭಾಗದ ಮಹಾನಿರ್ದೇಶಕರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಶೇಕಡಾ 3ರಷ್ಟು ಬೆಲೆ ಏರಿಕೆಯಾಗಿದ್ದು, ಒಂದು ವರ್ಷದಲ್ಲಿ ಬೆಲೆ ಏರಿಕೆ ಪ್ರಮಾಣ ಶೇಕಡಾ 11.5ರಷ್ಟು ಆದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಸಚಿವಾಲಯ ಸ್ಪಷ್ಟಪಡಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಅಕ್ಕಿ ಲಭ್ಯತೆಯನ್ನು ಖಾತರಿಪಡಿಸುವ ಸಲುವಾಗಿ ಮತ್ತು ಬೆಲೆಯನ್ನು ಇಳಿಸುವ ಪ್ರಯತ್ನವಾಗಿ ಬಾಸ್ಮತಿ ಹೊರತುಪಡಿಸಿ ಉಳಿದ ಎಲ್ಲ ತಳಿಯ ಅಕ್ಕಿಯ ರಫ್ತಿನ ಮೇಲೆ ಶೇಕಡ 20ರಷ್ಟು ರಫ್ತು ಸುಂಕ ವಿಧಿಸಲಾಗಿತ್ತು.