ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಧ್ವನಿವರ್ಧಕ ಬಳಕೆ, ಮಾಂಸ ಮಾರಾಟ ನಿಯಂತ್ರಣ ಕುರಿತು ಆದೇಶ ಹೊರಡಿಸಿದ ಮಧ್ಯಪ್ರದೇಶ ಸಿಎಂ
ಭೋಪಾಲ್: ಮಧ್ಯ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಅವರು ಅಧಿಕಾರ ವಹಿಸಿದ ನಂತರ ಬುಧವಾರ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಎಲ್ಲಾ ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿಸಿದ ಮಿತಿ ಹಾಗೂ ಸಮಯಕ್ಕಿಂತ ಮಿಗಿಲಾಗಿ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ತೆರೆದ ಸ್ಥಳಗಳಲ್ಲಿ ಮಾಂಸ ಹಾಗೂ ಮೊಟ್ಟೆಗಳ ಮಾರಾಟವನ್ನು ಆಹಾರ ಸುರಕ್ಷತಾ ಕಾಯಿದೆ ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಿಯಂತ್ರಿಸಲು ಕೂಡ ಸೂಚನೆಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ಕುರಿತು ಸಂಬಂಧಿತರಲ್ಲಿ ನಿಯಮಗಳ ಅರಿವು ಮೂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಯಾದವ್, ಸುಪ್ರೀಂ ಕೋರ್ಟ್ ಮಾರ್ಗಸೂಚಿಯಾನುಸಾರ ಧ್ವನಿವರ್ಧಕ ಬಳಕೆಯನ್ನು ನಿಯಂತ್ರಿಸಲಾಗುವುದು ಎಂದು ಹೇಳಿದ್ದಾರೆ.
ಧ್ವನಿವರ್ಧಕಗಳ ಬಳಕೆಯ ನಿಯಮಗಳನ್ನು ಅನುಸರಿಸಲಾಗುತ್ತಿದೆಯೇ ಎಂದು ಪರಿಶೀಲಿಸಲು ಹಾಗೂ ಉಲ್ಲಂಘನೆಗಳಿವೆಯೇ ಎಂದು ತಿಳಿದು ಮೂರು ದಿನಗಳೊಳಗೆ ವರದಿ ಸಲ್ಲಿಸಲು ಎಲ್ಲಾ ಜಿಲ್ಲೆಗಳಲ್ಲಿ ಫ್ಲೈಯಿಂಗ್ ಸ್ಕ್ವ್ಯಾಡ್ ರಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಸಾರವಾಗಿ ರಾಜ್ಯದ ಎಲ್ಲಾ 52 ಜಿಲ್ಲೆಗಳಲ್ಲಿ ಎಕ್ಸಲೆನ್ಸ್ ಕಾಲೇಜುಗಳನ್ನು ಆರಂಭಿಸಲಾಗುವುದು ಎಂದೂ ಅವರು ಹೇಳಿದ್ದಾರೆ.