ಮಾರ್ಚ್ 24, 25ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ
Photo - DNA
ಹೊಸದಿಲ್ಲಿ : ಮಾರ್ಚ್ 24 ಹಾಗೂ 25ರಂದು ದೇಶಾದ್ಯಂತ ಮುಷ್ಕರ ನಡೆಸಲಾಗುವುದು ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್ಬಿಯು) ಗುರುವಾರ ತಿಳಿಸಿದೆ.
ಭಾರತೀಯ ಬ್ಯಾಂಕ್ ಗಳ ಸಂಘ (ಐಬಿಎ)ದ ಜೊತೆ ಪ್ರಮುಖ ಬೇಡಿಕೆಗಳ ಕುರಿತ ನಡೆದ ಚರ್ಚೆಗಳು ಯಾವುದೇ ಸಕಾರಾತ್ಮಕ ಫಲಿತಾಂಶ ನೀಡದ ಹಿನ್ನೆಲೆಯಲ್ಲಿ ಈ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಯುಎಫ್ಬಿಯು ಹೇಳಿದೆ.
ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ವಾರಕ್ಕೆ ಐದು ದಿನ ಕೆಲಸ, ಎಲ್ಲಾ ಶ್ರೇಣಿಗಳ ಹುದ್ದೆಗಳಿಗೆ ನೇಮಕಾತಿ, ಕೆಲಸಗಾರರು ಹಾಗೂ ಅಧಿಕಾರಿ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡುವುದು ಮೊದಲಾದ ಬೇಡಿಕೆಗಳನ್ನು ಐಬಿಎಯೊಂದಿಗಿನ ಸಭೆಯಲ್ಲಿ ಯುಎಫ್ಬಿಯು ಪ್ರಸ್ತಾವಿಸಿವೆ. ಆದರೆ, ಪ್ರಮುಖ ಸಮಸ್ಯೆಗಳೇ ಪರಿಹಾರವಾಗಿಲ್ಲ ಎಂದು ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್ಸಿಬಿಇ)ದ ಪ್ರಧಾನ ಕಾರ್ಯದರ್ಶಿ ಎಲ್. ಚಂದ್ರಶೇಖರ್ ಹೇಳಿದ್ದಾರೆ.
9 ಬ್ಯಾಂಕ್ ನೌಕರರ ಸಂಘಟನೆಗಳ ಒಕ್ಕೂಟ ಯುಎಫ್ಬಿಯು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಇತ್ತೀಚೆಗಿನ ನಿರ್ದೇಶನಗಳನ್ನು ಹಿಂಪಡೆಯುವಂತೆ ಕೂಡ ಕೋರಿದೆ. ಈ ನಿರ್ದೇಶನ ಕಾರ್ಯಕ್ಷಮತೆಯ ಪರಿಶೀಲನೆ, ಕಾರ್ಯಕ್ಷಮತೆ ಸಂಬಂಧಿತ ಪ್ರೋತ್ಸಾಹಕಗಳನ್ನು ಉಲ್ಲೇಖಿಸಿದೆ. ಇಂತಹ ಕ್ರಮಗಳು ಬ್ಯಾಂಕ್ ನೌಕರರ ಉದ್ಯೋಗ ಭದ್ರತೆಗೆ ಬೆದರಿಕೆ ಒಡ್ಡುತ್ತದೆ ಎಂದು ಅದು ಹೇಳಿದೆ.
ಹಣಕಾಸು ಸೇವೆಗಳ ಇಲಾಖೆಯಿಂದ ಸಾರ್ವಜನಿಕ ರಂಗದ ಬ್ಯಾಂಕ್ ಗಳ ಸೂಕ್ಷ ನಿರ್ವಹಣೆಯನ್ನು ಕೂಡ ಯುಎಫ್ಬಿಯು ವಿರೋಧಿಸಿದೆ. ಇಲಾಖೆಯ ಈ ಹಸ್ತಕ್ಷೇಪ ಬ್ಯಾಂಕ್ನ ಆಡಳಿತ ಮಂಡಳಿಗಳ ಸ್ವಾಯತ್ತತೆಯನ್ನು ನಿರ್ಲಕ್ಷಿಸುತ್ತದೆ ಎಂದು ಅದು ತಿಳಿಸಿದೆ.
ಯುಎಫ್ಬಿಯುನ ಇತರ ಬೇಡಿಕೆಗಳಲ್ಲಿ ಐಬಿಎಯೊಂದಿಗಿನ ಇತರ ಸಮಸ್ಯೆಗಳನ್ನು ಪರಿಹರಿಸುವುದು, ಗ್ಯಾಚ್ಯುವಿಟಿ ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಿಸಲು ಗ್ರಾಚ್ಯುಟಿ ಕಾಯ್ದೆಗೆ ತಿದ್ದುಪಡಿ ಮಾಡುವುದು, ಅದನ್ನು ಸರಕಾರಿ ನೌಕರರ ಯೋಜನೆಯೊಂದಿಗೆ ಜೋಡಿಸುವುದು ಹಾಗೂ ಆದಾಯ ತೆರಿಗೆಯಿಂದ ವಿನಾಯತಿ ಪಡೆಯವುದು ಕೂಡ ಸೇರಿದೆ.