ಹಳೆಯ ಪೋಸ್ಟ್ ಗಳಲ್ಲಿ ತಮಿಳಿನ 'ரூ' ಚಿಹ್ನೆ ಬಳಸಿದ್ದ ನಿರ್ಮಲಾ ಸೀತಾರಾಮನ್; ಟೀಕೆಗೆ ಗುರಿಯಾದ ವಿತ್ತ ಸಚಿವೆ

Update: 2025-03-15 11:51 IST
ಹಳೆಯ ಪೋಸ್ಟ್ ಗಳಲ್ಲಿ ತಮಿಳಿನ ரூ ಚಿಹ್ನೆ ಬಳಸಿದ್ದ ನಿರ್ಮಲಾ ಸೀತಾರಾಮನ್; ಟೀಕೆಗೆ ಗುರಿಯಾದ ವಿತ್ತ ಸಚಿವೆ
  • whatsapp icon

ಹೊಸದಿಲ್ಲಿ: ತಮಿಳುನಾಡು ಸರ್ಕಾರವು 2025-26 ರ ರಾಜ್ಯ ಬಜೆಟ್ ಪತ್ರದಲ್ಲಿ ಅಧಿಕೃತ ರೂಪಾಯಿ ಚಿಹ್ನೆ(₹)ಯನ್ನು ತಮಿಳು ಅಕ್ಷರ 'ரூ'(ರೂ)ವಿನೊಂದಿಗೆ ಬದಲಾಯಿಸಿದ್ದಕ್ಕಾಗಿ ಟೀಕಿಸಿದ್ದ ಬಿಜೆಪಿಯು, ಅದೇ ಚಿಹ್ನೆಯನ್ನು ಬಳಸಿದ ತನ್ನದೇ ನಾಯಕರ ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್‌ ಗಳು ವೈರಲ್ ಆದ ನಂತರ ಟೀಕೆಗೆ ಗುರಿಯಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಡಿಎಂಕೆ ನೇತೃತ್ವದ ಸರ್ಕಾರವು ಪ್ರಾದೇಶಿಕತೆಯ ಸೋಗಿನಲ್ಲಿ ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದ್ದರು. ಈ ಮಧ್ಯೆ ಪತ್ರಕರ್ತ, ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್, ನಿರ್ಮಲಾ ಸೀತಾರಾಮನ್ ಅವರು 2017 ರಲ್ಲಿ ತಮಿಳು 'ரூ'(ರೂ)ಚಿಹ್ನೆಯನ್ನು ಹಲವು ಬಾರಿ ಬಳಸಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್‌ನ ಸ್ಕ್ರೀನ್‌ ಶಾಟ್‌ ಗಳನ್ನು ಹಂಚಿಕೊಂಡಿದ್ದಾರೆ.

ಅಲ್ಲದೇ ಈ ವಿಚಾರದಲ್ಲಿ ಡಿಎಂಕೆ ಸರ್ಕಾರವನ್ನು ಪ್ರಶ್ನಿಸಿದ್ದ ಮತ್ತು ರಾಷ್ಟ್ರೀಯ ರೂಪಾಯಿ ಚಿಹ್ನೆಗೆ ಅವಮಾನ ಎಂದು ಕರೆದಿದ್ದ ಬಿಜೆಪಿ ತಮಿಳುನಾಡು ಅಧ್ಯಕ್ಷ ಅಣ್ಣಾಮಲೈ ಅವರು 2023 ಮತ್ತು ಕಳೆದ ವರ್ಷದ ಟ್ವೀಟ್ ಗಳಲ್ಲಿ ಸೇರಿದಂತೆ ಹಲವಾರು ಪೋಸ್ಟ್‌ ಗಳಲ್ಲಿ 'ரூ'(ರೂ)ಅನ್ನು ಬಳಸಿರುವುದೂ ಈಗ ವೈರಲ್ ಆಗಿದೆ.

ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕೆಂಬ ಒತ್ತಾಯದ ನಡುವೆ ತಮಿಳುನಾಡು ಸರಕಾರ ಮತ್ತು ಕೇಂದ್ರ ಸರಕಾರದ ನಡುವೆ ಭಾಷಾ ವಿಚಾರದಲ್ಲಿ ತೀವ್ರ ತಿಕ್ಕಾಟ ನಡೆಯುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು 'ದ್ರಾವಿಡ ಮಾದರಿ' ಮತ್ತು 'ತಮಿಳುನಾಡು ಬಜೆಟ್ 2025' ಎಂಬ ಹ್ಯಾಶ್ಟ್ಯಾಗ್ಗಳೊಂದಿಗೆ ತಮಿಳು ರೂಪಾಯಿ ಚಿಹ್ನೆಯನ್ನು ಒಳಗೊಂಡ ಬಜೆಟ್ ಲೋಗೋವನ್ನು ಇತ್ತೀಚಿಗೆ ಅನಾವರಣಗೊಳಿಸಿದ ಬಳಿಕ ಈ ವಿವಾದ ತಾರಕಕ್ಕೇರಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News