ಪವಾರ್ ಕುಟುಂಬ ಕದನಕ್ಕೆ ಮತ್ತೊಮ್ಮೆ ವೇದಿಕೆಯಾದ ಬಾರಾಮತಿ

Update: 2024-10-27 03:36 GMT

PC: screengrab/X.com/ANI

ಪುಣೆ: ಮಹಾರಾಷ್ಟ್ರ ರಾಜಕೀಯದಲ್ಲಿ ಮುಂಚೂಣಿಯಲ್ಲಿರುವ ಪವಾರ್ ಕುಟುಂಬ ಮತ್ತೊಂದು ಮಹಾ ಕದನಕ್ಕೆ ಸಜ್ಜಾಗಿದೆ. ನಿಕಟವಾದ ಕೌಟುಂಬಿಕ ಬಂಧದ ನಡುವೆಯೂ ಶರದ್ ಪವಾರ್ ನೇತೃತ್ವದ ಎನ್ಸಿಪಿ ಅಭ್ಯರ್ಥಿಯಾಗಿ ಯುಗೇಂದ್ರ ಪವಾರ್ ತಮ್ಮ ಚಿಕ್ಕಪ್ಪ ಅಜಿತ್ ಪವಾರ್ ವಿರುದ್ಧ ಬಾರಾಮತಿಯಲ್ಲಿ ಸ್ಪರ್ಧಿಸಲಿದ್ದಾರೆ. ಯುಗೇಂದ್ರ ಪವಾರ್ ಅವರು ಶರದ್ ಪವಾರ್ ಅವರ ಸೋದರ ಮೊಮ್ಮಗ. ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ನಡೆಯುವ ಚುನಾವಣೆಯಲ್ಲಿ ಯುಗೇಂದ್ರ ಪವಾರ್ ಮೊಟ್ಟಮೊದಲ ಬಾರಿಗೆ ರಾಜಕೀಯ ಪದಾರ್ಪಣೆ ಮಾಡುತ್ತಿದ್ದಾರೆ.

ಏಳು ಬಾರಿ ಬಾರಾಮತಿ ಕ್ಷೇತ್ರದಿಂದ ಗೆದ್ದಿರುವ ಅಜಿತ್ ಪವಾರ್ ಗೆ ಸವಾಲು ಹಾಕಿರುವ ಬಗ್ಗೆ ಎಎನ್ಐ ಜತೆ ಮಾತನಾಡಿದ ಯುಗೇಂದ್ರ ಪವಾರ್, "ಒಂದಷ್ಟು ಬೇಸರವಾಗಿದೆ. ನಮ್ಮ ಕುಟುಂಬದೊಳಗೇ ಇದು ಬಂದಿರುವುದು ದುರದೃಷ್ಟಕರ. ವಿಧಾನಸಭೆಯಲ್ಲಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲೇ ಇದು ಆರಂಭವಾಗಿತ್ತು. ನಾವು ಸದಾ ಒಂದಾಗಿಯೇ ಇದ್ದೇವೆ ಹಾಗೂ ಹಾಲಿ ಶಾಸಕರು ಕೂಡಾ ನಮ್ಮ ಪಕ್ಷದ ಸಂಸ್ಥಾಪಕ ಶರದ್ ಪವಾರ್ ಅವರ ಮಾರ್ಗದರ್ಶನದಲ್ಲೇ ಬೆಳೆದವರು. ಏನು ನಡೆದಿದೆ ಎನ್ನುವುದನ್ನು ಇಡೀ ಭಾರತ ನೋಡಿದೆ. ಪಕ್ಷ ವಿಭಜನೆಯಾಗಿದೆ. ಚಿಹ್ನೆಯನ್ನು ಚುನಾವಣಾ ಆಯೋಗ ಅವರಿಗೆ ನೀಡಿದೆ" ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ, ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಅವರನ್ನು ಸೋಲಿಸಿದ ಬಳಿಕ ಬಾರಾಮತಿ ಮತ್ತೊಮ್ಮೆ ಪವಾರ್ ವರ್ಸಸ್ ಪವಾರ್ ಹೋರಾಟಕ್ಕೆ ಸಜ್ಜಾಗಿದೆ. 2023ರ ಜೂನ್ ನಲ್ಲಿ ಅಜಿತ್ ಪವಾರ್ ಎನ್ ಸಿಪಿ ವಿಭಜಿಸಿದ್ದರು.

"ಇದು ದುರದೃಷ್ಟಕರ. ಆದರೆ ಕುಟುಂಬದ ಎಲ್ಲರೂ ಎನ್ ಸಿಪಿ ಸಂಸ್ಥಾಪಕ ಶರದ್ ಪವಾರ್ ಅವರ ಜತೆ ಉಳಿಯಲು ನಿರ್ಧರಿಸಿದೆ. ಅವರು ನಮ್ಮ ಕುಟುಂಬದ ಮಹಾಪೋಷಕರು. ಅವರಿಂದಾಗಿ ಬಾರಾಮತಿ ಮಾತ್ರವಲ್ಲ ಸುತ್ತಮುತ್ತ ಎಲ್ಲರೂ ಸಮೃದ್ಧಿ ಪಡೆದಿದ್ದಾರೆ" ಎಂದು ಯುಗೇಂದ್ರ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News