2024ರ ಜಾಗತಿಕ ಪ್ರಕೃತಿ ಸಂರಕ್ಷಣೆ ಸೂಚ್ಯಂಕ |180 ದೇಶಗಳಲ್ಲಿ ಭಾರತಕ್ಕೆ 176ನೇ ಸ್ಥಾನ
ಹೊಸದಿಲ್ಲಿ : ಗುರುವಾರ ಬಿಡುಗಡೆಗೊಂಡ 2024ರ ಜಾಗತಿಕ ಪ್ರಕೃತಿ ಸಂರಕ್ಷಣೆ ಸೂಚ್ಯಂಕ(ಜಿಎನ್‌ಸಿಐ)ದಲ್ಲಿ 180 ದೇಶಗಳ ಪೈಕಿ ಭಾರತವು 176ನೇ ಸ್ಥಾನದಲ್ಲಿದೆ.
100ರಲ್ಲಿ 45.5 ಅಂಕಗಳೊಂದಿಗೆ ಭಾರತವು ಪಟ್ಟಿಯ ಕೆಳಭಾಗದಲ್ಲಿ ಕಿರಿಬಾಟಿ(ಕೊನೆಯ ಸ್ಥಾನ), ಟರ್ಕಿ(179), ಇರಾಕ್(178) ಮತ್ತು ಮೈಕ್ರೋನೇಶಿಯಾ(177)ಗಳಿಗಿಂತ ಕೊಂಚ ಮೇಲಿದೆ.
ಈ ತಿಂಗಳು ಆರಂಭಿಸಲಾಗಿರುವ ಜಾಗತಿಕ ಪ್ರಕೃತಿ ಸಂರಕ್ಷಣೆ ಸೂಚ್ಯಂಕದಲ್ಲಿ ಭೂಮಿಯ ನಿರ್ವಹಣೆ, ಜೀವವೈವಿಧ್ಯಕ್ಕೆ ಅಪಾಯ, ಆಡಳಿತ ಮತ್ತು ಸಾಮರ್ಥ್ಯ ಹಾಗೂ ಭವಿಷ್ಯದ ಪ್ರವೃತ್ತಿಗಳು ; ಈ ನಾಲ್ಕು ಮಾನದಂಡಗಳ ಆಧಾರದಲ್ಲಿ ಪ್ರಕೃತಿ ಸಂರಕ್ಷಣೆ ಪ್ರಯತ್ನಗಳ ಮೌಲ್ಯಮಾಪನವನ್ನು ಮಾಡಲಾಗುತ್ತದೆ.
ಆ ಮೂಲಕ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಸಮತೋಲನದಲ್ಲಿ ಪ್ರತಿ ದೇಶವು ಸಾಧಿಸಿರುವ ಪ್ರಗತಿಯನ್ನು ನಿರ್ಧರಿಸಲಾಗುತ್ತದೆ.
ಇಸ್ರೇಲ್ ನ ಬೆನ್-ಗುರಿಯನ್ ಯುನಿವರ್ಸಿಟಿ ಆಫ್ ನೆಗೆವ್‌ನ ಗೋಲ್ಡ್‌ಮನ್ 'ಸೊನೆನ್‌ಫೆಲ್ಡ್ ಸ್ಕೂಲ್ ಆಫ್ ಸಸ್ಟೈನೇಬಿಲಿಟಿ ಆ್ಯಂಡ್ ಕ್ಲೈಮೇಟ್ ಚೇಂಜ್' ಮತ್ತು ಲಾಭರಹಿತ ವೆಬ್‌ಸೈಟ್ ಬಯೊಡಿಬಿ ಇವುಗಳು ಜಂಟಿಯಾಗಿ ಈ ಸೂಚ್ಯಂಕವನ್ನು ಅಭಿವೃದ್ಧಿಗೊಳಿಸಿವೆ.
ಭಾರತವು ಕೆಳಗಿನ ಸ್ಥಾನದಲ್ಲಿರುವುದಕ್ಕೆ ಜೀವವೈವಿಧ್ಯತೆಗೆ ಹೆಚ್ಚುತ್ತಿರುವ ಅಪಾಯಗಳು ಮತ್ತು ಭೂಮಿಯ ಅಸಮರ್ಥ ನಿರ್ವಹಣೆ ಪ್ರಮುಖ ಕಾರಣಗಳನ್ನಾಗಿ ಸೂಚ್ಯಂಕವು ತೋರಿಸಿದೆ.
ನಗರ, ಕೈಗಾರಿಕೆ ಮತ್ತು ಕೃಷಿ ಉದ್ದೇಶಗಳಿಗಾಗಿ ಭೂ ಪರಿವರ್ತನೆಯು ಶೇ.53ರ ಮಟ್ಟವನ್ನು ತಲುಪಿರುವುದರಿಂದ ಸುಸ್ಥಿರ ಭೂ ಬಳಕೆಯ ಪದ್ಧತಿಗಳ ಅಗತ್ಯವಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಕೃಷಿ, ನಗರೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗಳಿಂದಾಗಿ ಆವಾಸ ಸ್ಥಾನಗಳ ನಷ್ಟ ಮತ್ತು ವಿಘಟನೆಯಂತಹ ಹಲವಾರು ಅಂಶಗಳು ದೇಶದ ಜೀವವೈವಿಧ್ಯತೆಗೆ ಅಪಾಯಗಳನ್ನೊಡ್ಡಿವೆ ಎಂದು ಹೇಳಿರುವ ಸಂಶೋಧಕರು, ಅರಣ್ಯನಾಶದಿಂದಾಗಿ 2001 ಮತ್ತು 2019ರ ನಡುವಿನ ಅವಧಿಯಲ್ಲಿ 23,300 ಚ.ಕಿ.ಮೀ.ವಿಸ್ತೀರ್ಣದಷ್ಟು ಆತಂಕಕಾರಿ ಪ್ರಮಾಣದಲ್ಲಿ ಹಸಿರು ಹೊದಿಕೆಯು ಅಸ್ತಿತ್ವವನ್ನು ಕಳೆದುಕೊಂಡಿದೆ ಎಂದು ಬೆಟ್ಟು ಮಾಡಿದ್ದಾರೆ.
ಭಾರತವು ಭರವಸೆದಾಯಕ ಅವಕಾಶಗಳೊಂದಿಗೆ ಆತಂಕಕಾರಿ ಜೀವವೈವಿಧ್ಯ ಸವಾಲುಗಳನ್ನೂ ಎದುರಿಸುತ್ತಿದೆ. ವಿಶ್ವದ ಕೆಲವು ದಟ್ಟಣೆಯ ಪ್ರದೇಶಗಳಿಗೆ ಸಮಾನವಾಗಿ ಜನಸಂಖ್ಯೆ ಸಾಂದ್ರತೆ ಮತ್ತು 1970ರ ದಶಕದ ಉತ್ತರಾರ್ಧದಿಂದ ಇಮ್ಮಡಿಗೊಂಡಿರುವ ಜನಸಂಖ್ಯೆಯಿಂದಾಗಿ ದೇಶದ ಜೀವವೈವಿಧ್ಯ ಶ್ರೀಮಂತಿಕೆಯು ನಿರಂತರವಾಗಿ ಅಪಾಯ ಎದುರಿಸುತ್ತಿದೆ ಎಂದು ತಿಳಿಸಿದ್ದಾರೆ.
ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸುವ ನಿಬಂಧನೆಗಳ ಅನುಷ್ಠಾನ, ಪರಿಸರ ಸಂರಕ್ಷಣೆಗಾಗಿ ನಿಧಿಗಳ ಹಂಚಿಕೆ ಮತ್ತು ಸಮರ್ಥ ಸಂರಕ್ಷಣೆ ಕ್ರಮಗಳ ಉತ್ತೇಜನ ಇವು ನೀತಿ ನಿರೂಪಕರ ಇಚ್ಛಾಶಕ್ತಿಯನ್ನು ಅವಲಂಬಿಸಿವೆ ಎಂದೂ ಸಂಶೋಧಕರು ಹೇಳಿದ್ದಾರೆ.