ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು | ಸಾಮಾಜಿಕ ಮಾಧ್ಯಮಗಳಿಗೆ ಸರಕಾರದಿಂದ ಸಲಹಾಸೂಚಿ

Update: 2024-10-26 16:00 GMT

PC : PTI 

ಹೊಸದಿಲ್ಲಿ : ಕಳೆದ ಎರಡು ವಾರಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳ ಸುಮಾರು 300ರಿಂದ 400 ವಿಮಾನಯಾನಗಳಿಗೆ ಬೆದರಿಕೆ ಸಂದೇಶಗಳು ಬಂದಿರುವ ಹಿನ್ನೆಲೆಯಲ್ಲಿ ಸರಕಾರವು ಎಕ್ಸ್(ಹಿಂದಿನ ಟ್ವಿಟರ್) ಮತ್ತು ಮೆಟಾದಂತಹ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸಲಹಾಸೂಚಿಯೊಂದನ್ನು ಹೊರಡಿಸಿದೆ.

ತಮ್ಮ ವೇದಿಕೆಗಳಿಂದ ಪ್ರಸಾರಗೊಳ್ಳುತ್ತಿರುವ ಹುಸಿ ಬಾಂಬ್ ಬೆದರಿಕೆಗಳು ಸೇರಿದಂತೆ ಇಂತಹ ದುರುದ್ದೇಶಪೂರ್ವಕ ಕೃತ್ಯಗಳಿಗೆ ಅವಕಾಶ ನೀಡದಿರಲು ಅಗತ್ಯ ಪ್ರಯತ್ನಗಳನ್ನು ಮಾಡುವಂತೆ ಸರಕಾರವು ಅವುಗಳಿಗೆ ತಿಳಿಸಿದೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಶುಕ್ರವಾರ ಹೊರಡಿಸಿರುವ ಸಲಹಾ ಸೂಚಿಯು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಫಾರ್ವರ್ಡಿಂಗ್ / ರಿ-ಶೇರಿಂಗ್ / ರಿ-ಪೋಸ್ಟಿಂಗ್ / ರಿ-ಟ್ವೀಟಿಂಗ್ ಆಯ್ಕೆಗಳ ಲಭ್ಯತೆಯಿಂದಾಗಿ ಇಂತಹ ಹುಸಿ ಬಾಂಬ್ ಬೆದರಿಕೆಗಳ ಹರಡುವಿಕೆಯು ಅನಿಯಂತ್ರಿತವಾಗಿದ್ದು, ಇದು ಅಪಾಯಕಾರಿಯಾಗಿದೆ. ಇಂತಹ ಹುಸಿ ಬಾಂಬ್ ಬೆದರಿಕೆಗಳು ಹೆಚ್ಚಾಗಿ ಸಾರ್ವಜನಿಕ ಸುವ್ಯವಸ್ಥೆ, ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಗಳು ಮತ್ತು ವಿಮಾನ ಪ್ರಯಾಣಿಕರ ಸುರಕ್ಷತೆಗೆ ಭಾರೀ ವ್ಯತ್ಯಯವನ್ನುಂಟು ಮಾಡುವ ಸುಳ್ಳು ಮಾಹಿತಿಗಳಾಗಿವೆ ಎಂದು ಬೆಟ್ಟು ಮಾಡಿದೆ.

ಹುಸಿ ಬಾಂಬ್ ಬೆದರಿಕೆಗಳು ಸೇರಿದಂತೆ 2021ರ ಐಟಿ ನಿಯಮಗಳಡಿ ನಿರ್ದಿಷ್ಟ ಪಡಿಸಲಾಗಿರುವ ಇಂತಹ ಕಾನೂನುಬಾಹಿರ ಮಾಹಿತಿಗಳನ್ನು ನಿಯಮಗಳಡಿ ತಿಳಿಸಲಾಗಿರುವ ಕಟ್ಟುನಿಟ್ಟಿನ ಸಮಯ ಮಿತಿಯೊಳಗೆ ತೆಗೆದುಹಾಕುವುದು ಅಥವಾ ಪ್ರವೇಶವನ್ನು ನಿಷ್ಕ್ರಿಯಗೊಳಿಸುವುದು ಸೇರಿದಂತೆ ತಮ್ಮ ಬದ್ಧತೆಗಳನ್ನು ಶೃದ್ಧೆಯಿಂದ ನಿರ್ವಹಿಸುವಂತೆ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಸೂಚಿಸಲಾಗಿದೆ. ತಮ್ಮ ಅಗತ್ಯ ಪ್ರಯತ್ನಗಳ ಭಾಗವಾಗಿ ಇಂತಹ ತಪ್ಪು ಮಾಹಿತಿಗಳನ್ನು ತೆಗೆದುಹಾಕುವುದು ಅಥವಾ ಪ್ರವೇಶವನ್ನು ನಿಷ್ಕ್ರಿಯಗೊಳಿಸುವ ಜೊತೆಗೆ ಭಾರತ ಏಕತೆ, ಸಮಗ್ರತೆ, ಸಾರ್ವಭೌಮತೆ ಅಥವಾ ಆರ್ಥಿಕ ಭದ್ರತೆಗೆ ಬೆದರಿಕೆಯ ಉದ್ದೇಶ ಸೇರಿದಂತೆ ತಮ್ಮ ವೇದಿಕೆಗಳ ಬಳಕೆದಾರರು ಎಸಗಿದ್ದಾರೆ ಎಂದು ಗ್ರಹಿಸಲಾದ ನಿರ್ದಿಷ್ಟ ಅಪರಾಧಗಳನ್ನು ವರದಿ ಮಾಡುವುದು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದಡಿ ಅವುಗಳ ಹೆಚ್ಚುವರಿ ಹೊಣೆಗಾರಿಕೆಯಾಗಿದೆ ಎಂದೂ ಸಲಹಾಸೂಚಿಯಲ್ಲಿ ತಿಳಿಸಲಾಗಿದೆ. ವೈಫಲ್ಯವು ದಂಡನೆಗೆ ಅವಕಾಶ ಮಾಡಿಕೊಡಲಿದೆ ಎಂದು ಎಚ್ಚರಿಕೆಯನ್ನೂ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News