ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ: ಆರೋಪಿ ಶುಭಂ ಉಪಾಧ್ಯಾಯ ಬಂಧನ
ಹೊಸದಿಲ್ಲಿ: ವಿಮಾನಯಾನ ಸಂಸ್ಥೆಗಳಿಗೆ ನಕಲಿ ಬಾಂಬ್ ಬೆದರಿಕೆ ಹಾಕಿದ ಆರೋಪದಲ್ಲಿ ದಿಲ್ಲಿಯಲ್ಲಿ ಶುಭಂ ಉಪಾಧ್ಯಾಯ ಎಂಬಾತನನ್ನು ಬಂಧಿಸಲಾಗಿದೆ ಎಂದು NDTV ವರದಿ ಮಾಡಿದೆ.
ದೂರದರ್ಶನದಲ್ಲಿ ಸರಣಿ ಬೆದರಿಕೆ ಕರೆಗಳ ಕುರಿತು ಸುದ್ದಿ ನೋಡಿದ ಬಳಿಕ ನಿರುದ್ಯೋಗಿಯಾಗಿದ್ದ ಶುಭಂ ಉಪಾಧ್ಯಾಯ(25) ಪ್ರಚಾರಕ್ಕಾಗಿ ಬೆದರಿಕೆ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ದಿಲ್ಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 14ರಿಂದ 275ಕ್ಕೂ ಅಧಿಕ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದಿವೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಕಳೆದ ವಾರ ಯುವಕನೋರ್ವನನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು.
ಸಾಮಾಜಿಕ ಮಾಧ್ಯಮ ಖಾತೆಯೊಂದರಿಂದ ದಿಲ್ಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಮುಂಜಾನೆ ಎರಡು ಬೆದರಿಕೆ ಸಂದೇಶಗಳು ಬಂದಿವೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಈ ಖಾತೆಯು ಪಶ್ಚಿಮ ದಿಲ್ಲಿಯ ಉತ್ತಮ್ ನಗರ ಪ್ರದೇಶದ ರಾಜಪುರಿ ಮೂಲದ ಶುಭಂ ಉಪಾಧ್ಯಾಯ ಎಂಬಾತನಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಉಪಾಧ್ಯಾಯನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ʼಟಿವಿಯಲ್ಲಿ ಬೆದರಿಕೆ ಕರೆಗಳ ಬಗ್ಗೆ ವರದಿಗಳನ್ನು ನೋಡಿ ತಾನು ಕೂಡ ಪ್ರಚಾರಕ್ಕೆ ಬೆದರಿಕೆ ಹಾಕಿದ್ದಾಗಿ ಹೇಳಿಕೊಂಡಿದ್ದಾನೆ.
25 ವರ್ಷದ ಶುಭಂ ಉಪಾಧ್ಯಾಯ ನಿರುದ್ಯೋಗಿಯಾಗಿದ್ದು,12ನೇ ತರಗತಿವರೆಗೆ ವಿದ್ಯಾಭ್ಯಾಸವನ್ನು ಮಾಡಿದ್ದಾನೆ. ಎಲ್ಲಾ ಅಗತ್ಯ ಭದ್ರತಾ ಕ್ರಮಗಳು ಜಾರಿಯಲ್ಲಿವೆ ಎಂದು ನಾವು ಸಾರ್ವಜನಿಕರಿಗೆ ಭರವಸೆ ನೀಡುತ್ತೇವೆ ಮತ್ತು ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡು ಬಂದರೆ ಅಧಿಕಾರಿಗಳಿಗೆ ತಿಳಿಸುವಂತೆ ನಾವು ಕೇಳಿಕೊಳ್ಳುತ್ತಿದ್ದೇವೆ ಎಂದು ದಿಲ್ಲಿ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 16ರಂದು ಮುಂಬೈ ಪೊಲೀಸರು ಛತ್ತೀಸ್ಗಢದ ರಾಜ್ನಂದಗಾಂವ್ ನಲ್ಲಿ 17 ವರ್ಷದ ಆರೋಪಿಯನ್ನು ಅಕ್ಟೋಬರ್ 14ರಂದು ನಾಲ್ಕು ವಿಮಾನಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಕಸ್ಟಡಿಗೆ ತೆಗೆದುಕೊಂಡಿದ್ದರು.