ಔಷಧೀಯ ಗಿಡಮೂಲಿಕೆಗಳ ಬಗೆಗಿನ ಸಾಂಪ್ರದಾಯಿಕ ಜ್ಞಾನದ ದಾಖಲೀಕರಣ ಅಗತ್ಯವಿದೆ : ರಾಷ್ಟ್ರಪತಿ ದ್ರೌಪದಿ ಮುರ್ಮು

Update: 2024-10-26 14:31 GMT

ರಾಷ್ಟ್ರಪತಿ ದ್ರೌಪದಿ ಮುರ್ಮು | PC : PTI 

ರಾಯ್ಪುರ : ಹಳ್ಳಿಗಾಡಿನ ಜನರು ಹಾಗೂ ಆದಿವಾಸಿಗಳು ಔಷಧೀಯ ಸಸ್ಯ ಮತ್ತು ಗಿಡಮೂಲಿಕೆಗಳ ಬಗ್ಗೆ ಹೊಂದಿರುವ ಸಾಂಪ್ರದಾಯಿಕ ಜ್ಞಾನವು ಅಳಿಯದಂತೆ ರಕ್ಷಿಸಲು, ಅವರ ಜ್ಞಾನವನ್ನು ದಾಖಲೀಕರಣ ಮತ್ತು ಪ್ರಮಾಣೀಕರಣ ಮಾಡಬೇಕಾದ ಅಗತ್ಯವಿದೆ ಎಂದು ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯ ಪಟ್ಟರು.

ರಾಯ್ಪುರದಲ್ಲಿನ ಪಂಡಿತ್ ದೀನ್ ದಯಾಳ್ ಸ್ಮಾರಕ ಆರೋಗ್ಯ ವಿಜ್ಞಾನ ಮತ್ತು ಆಯುಷ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಛತ್ತೀಸ್ ಗಢ ಗಿಡಮೂಲಿಕೆಗಳು ಹಾಗೂ ಔಷಧೀಯ ಸಸ್ಯಗಳ ಭಂಡಾರವಾಗಿದ್ದು, ಈ ಬಗ್ಗೆ ಹಳ್ಳಿಗಾಡಿನ ಜನರು ಹಾಗೂ ಆದಿವಾಸಿಗಳು ಆಳವಾದ ಜ್ಞಾನ ಹೊಂದಿದ್ದಾರೆ ಎಂದು ಪ್ರಶಂಸಿಸಿದರು.

“ಇಂತಹ ಜ್ಞಾನ ಅಳಿಯುವುದನ್ನು ತಪ್ಪಿಸಲು ಹಾಗೂ ಸಂರಕ್ಷಿಸಿಡಲು ಅದನ್ನು ದಾಖಲೀಕರಣ ಮತ್ತು ಪ್ರಮಾಣೀಕರಣಗೊಳಿಸಬೇಕಾದುದು ಮುಖ್ಯವಾಗಿದೆ. ಅರಣ್ಯವಾಸಿಗಳ ಜ್ಞಾನಾಧಾರಿತ ಸಂಶೋಧನೆಯನ್ನು ಉತ್ತೇಜಿಸುವ ಮೂಲಕ, ಇಂತಹ ಮಾಹಿತಿಗಳನ್ನು ವೈಜ್ಞಾನಿಕವಾಗಿ ವ್ಯಾಪಕ ಪ್ರಮಾಣದಲ್ಲಿ ಬಳಕೆ ಮಾಡಬಹುದಾಗಿದೆ. ಇದರಿಂದ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ” ಎಂದು ಅವರು ಕರೆ ನೀಡಿದರು.

ಮಲೇರಿಯ, ಫಿಲೇರಿಯ ಹಾಗೂ ಕ್ಷಯದಂತಹ ಸಾಂಕ್ರಾಮಿಕ ರೋಗಗಳನ್ನು ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಅವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೇಂದ್ರ ಸರಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಇದಲ್ಲದೆ, ಅವರು ಆರೋಗ್ಯಕರ ಜೀವನ ಶೈಲಿಗೆ ಆಯುರ್ವೇದ ನೀಡುತ್ತಿರುವ ಕೊಡುಗೆಯನ್ನೂ ಶ್ಲಾಘಿಸಿದರು. ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಸಾಂಪ್ರದಾಯಿಕ ಯೋಗ ಮತ್ತು ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅವಲಂಬಿಸಬೇಕು ಎಂದೂ ಅವರು ಕರೆ ನೀಡಿದರು.

ಸ್ವತಃ ಆದಿವಾಸಿ ಸಮುದಾಯದವರಾದ ರಾಷ್ಟ್ರಪತಿ ದ್ರೌಪದಿ ಮುರ್ಮು, ಆದಿವಾಸಿ ಸಮುದಾಯಗಳ ಸಾಂಪ್ರದಾಯಿಕ ಜ್ಞಾನದ ಕುರಿತು ಒತ್ತು ನೀಡಿ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಕಾರ್ಯಕ್ರಮದಲ್ಲಿ ಛತ್ತೀಸ್ ಗಢ ರಾಜ್ಯಪಾಲ ರಾಮೆನ್ ದೇಕಾ, ಮುಖ್ಯಮಂತ್ರಿ ವಿಷ್ಣು ದಿಯೊ ಸಾಯಿ, ರಾಜ್ಯ ವಿಧಾನಸಭಾಧ್ಯಕ್ಷ ರಮಣ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News