‘ಡಾನಾ’ ಚಂಡಮಾರುತ ಮೃತಪಟ್ಟವರ ಸಂಖ್ಯೆ 4ಕ್ಕೇರಿಕೆ
ಕೋಲ್ಕತಾ : ಚಂಡಮಾರುತ ‘ಡಾನಾ’ದಿಂದಾಗಿ ಪಶ್ಚಿಮಬಂಗಾಳದಲ್ಲಿ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ. ಇದರಿಂದ ‘ಡಾನಾ’ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಪೂರ್ವ ಬರ್ಧಮಾನ್ ಜಿಲ್ಲೆಯ ಬುದ್‌ಬುದ್‌ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ನಾಗರಿಕ ಸ್ವಯಂಸೇವಕ ಚಂದನ್ ದಾಸ್ (31) ಮೃತಪಟ್ಟಿದ್ದಾರೆ. ಅವರು ಪೊಲೀಸ್ ತಂಡದೊಂದಿಗೆ ಹೊರಗೆ ಹೋಗಿದ್ದ ಸಂದರ್ಭ ಈ ಘಟನೆ ನಡೆದಿದೆ.
ಇದಲ್ಲದೆ, ತಾಂತಿಪಾರಾದ ಜಲಾವೃತ ರಸ್ತೆಯಲ್ಲಿ ಹೌರಾ ಮುನ್ಸಿಪಲ್ ಕಾರ್ಪೋರೇಶನ್‌ನ ಉದ್ಯೋಗಿಯೋರ್ವರ ಮೃತದೇಹ ಪತ್ತೆಯಾಗಿದೆ. ಅವರು ಮುಳುಗಿ ಸಾವನ್ನಪ್ಪಿರುವುದಾಗಿ ಶಂಕೆ ವ್ಯಕ್ತವಾಗಿದೆ.
‘ಡಾನಾ’ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಶುಕ್ರವಾರ ಇಬ್ಬರು ವಿದ್ಯುತ್ ಆಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದರು. ದಕ್ಷಿಣ 24 ಪರಗಣ ಜಿಲ್ಲೆಯ ಪಾಥರಪ್ರತಿಮಾದಲ್ಲಿ ಒಬ್ಬರು ಹಾಗೂ ಕೋಲ್ಕತ್ತಾದ ಭಬಾನಿಪುರ ಪ್ರದೇಶದಲ್ಲಿ ಇನ್ನೊಬ್ಬರು ಮೃತಪಟ್ಟಿದ್ದರು.
ಡಾನಾ ಚಂಡಮಾರುತ ಹಾಗೂ ಅದರ ಪರಿಣಾಮ ಸುರಿದ ಭಾರೀ ಮಳೆಯಿಂದಾಗಿ ಒಡಿಶಾದಲ್ಲಿ 1.75 ಲಕ್ಷ ಎಕರೆ ಭೂಮಿಯಲ್ಲಿನ ಬೆಳೆಗಳಿಗೆ ಹಾನಿ ಉಂಟಾಗಿವೆ. ಅಲ್ಲದೆ, 2.80 ಲಕ್ಷ ಎಕರೆ ಭೂಮಿ ಜಲಾವೃತವಾಗಿವೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.
ಚಂಡಮಾರುತದಿಂದ ಬೆಳೆ ನಾಶದ ಕುರಿತು ಜಂಟಿ ಮೌಲ್ಯ ಮಾಪನಕ್ಕೆ ಕೃಷಿ ಹಾಗೂ ಕಂದಾಯ ಇಲಾಖೆಗಳಿಗೆ ರಾಜ್ಯ ಸರಕಾರ ನಿರ್ದೇಶಿಸಿದೆ ಎಂದು ಕೃಷಿ ಹಾಗೂ ರೈತರ ಸಶಕ್ತೀಕರಣದ ಪ್ರಧಾನ ಕಾರ್ಯದರ್ಶಿ ಅರಬಿಂದ ಪಾಧಿ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.