ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪತ್ತೆ: ಜಿಮ್ ತರಬೇತುದಾರನ ಬಂಧನ
ಕಾನ್ಪುರ: ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ 32 ವರ್ಷದ ಮಹಿಳೆಯೊಬ್ಬರ ಮೃತದೇಹವನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಪತ್ತೆ ಹಚ್ಚಲಾಗಿದೆ. ಆಕೆಯನ್ನು ಆಕೆಯ ಜಿಮ್ ತರಬೇತುದಾರ ಹತ್ಯೆಗೈದಿದ್ದಾನೆ ಎಂದು ಆರೋಪಿಸಲಾಗಿದೆ.
ಮೃತ ಮಹಿಳೆ ಏಕ್ತಾ ಗುಪ್ತಾರ ಜಿಮ್ ತರಬೇತುದಾರ ವಿಶಾಲ್ ಸೋನಿ ನೀಡಿದ ಮಾಹಿತಿಯ ಮೇರೆಗೆ ಆಕೆಯ ಮೃತದೇಹವನ್ನು ಕಾನ್ಪುರ ಜಿಲ್ಲಾಧಿಕಾರಿ ನಿವಾಸದ ಬಳಿ ಇರುವ ಕ್ಲಬ್ ಒಂದರಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇದಕ್ಕೂ ಮುನ್ನ, ಮೃತ ಮಹಿಳೆಯ ಪತಿ ರಾಹುಲ್ ಗುಪ್ತ ದಾಖಲಿಸಿದ್ದ ದೂರನ್ನು ಆಧರಿಸಿ, ಈ ಪ್ರಕರಣದ ಸಂಬಂಧ ವಿಶಾಲ್ ಸೋನಿಯನ್ನು ಪೊಲೀಸರು ಬಂಧಿಸಿದ್ದರು.
ವಿಚಾರಣೆಯ ಸಂದರ್ಭದಲ್ಲಿ, ನನಗೂ ಏಕ್ತಾ ಗುಪ್ತಗೂ ಸಂಬಂಧವಿತ್ತು ಹಾಗೂ ನಾನು ಮತ್ತೊಬ್ಬ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವುದಕ್ಕೆ ಆಕೆ ಆಕ್ಷೇಪಿಸಿದ್ದರು ಎಂದು ವಿಶಾಲ್ ಸೋನಿ ಬಹಿರಂಗಗೊಳಿಸಿದ್ದ ಎನ್ನಲಾಗಿದೆ.
ಜೂನ್ 24ರಂದು ಜಿಮ್ ಗೆ ತೆರಳಿದ್ದ ಏಕ್ತಾ ಗುಪ್ತ, ಈ ವಿಷಯದ ಕುರಿತು ವಿಶಾಲ್ ಸೋನಿಯೊಂದಿಗೆ ವಾಗ್ವಾದ ನಡೆಸಿದ್ದರು. ಆಗ ವಿಶಾಲ್ ಸೋನಿ ಆಕೆಗೆ ಗುದ್ದಿದ್ದರಿಂದ, ಆಕೆ ಮೂರ್ಛೆ ಹೋಗಿದ್ದರು. ನಂತರ ವಿಶಾಲ್ ಸೋನಿ ಆಕೆಯನ್ನು ಹತ್ಯೆಗೈದು ಕಾನ್ಪುರ ಜಿಲ್ಲಾಧಿಕಾರಿ ನಿವಾಸದ ಬಳಿ ಇರುವ ಕ್ಲಬ್ ಒಂದರಲ್ಲಿ ಹೂತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಆದರೆ, ತಮ್ಮ ಪತ್ನಿ ವಿಶಾಲ್ ಸೋನಿಯೊಂದಿಗೆ ಸಂಬಂಧ ಹೊಂದಿದ್ದರು ಎಂಬ ಆರೋಪವನ್ನು ಆಕೆಯ ಪತಿ ರಾಹುಲ್ ಗುಪ್ತ ಅಲ್ಲಗಳೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಗುಪ್ತ, “ಇಬ್ಬರ ನಡುವೆ ಯಾವುದೇ ಪ್ರಣಯ ಸಂಬಂಧವಿರಲಿಲ್ಲ. ಇದು ಅಪಹರಣದ ಪ್ರಕರಣವಾಗಿದ್ದು, ನಾವು ಅಪಹರಣದ ದೂರು ದಾಖಲಿಸಿದ್ದೆವು ಹಾಗೂ ಕಳೆದ ನಾಲ್ಕು ತಿಂಗಳಲ್ಲಿ ಎರಡು ಬಾರಿ ಮಾಧ್ಯಮಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದೆವು” ಎಂದು ಸ್ಪಷ್ಟನೆ ನೀಡಿದ್ದಾರೆ.