ಮೀರತ್: ಮೂವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಮೀರತ್: ದಂಪತಿ ಹಾಗೂ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐದು ಮಂದಿಯ ಶವ ಗುರುವಾರ ರಾತ್ರಿ ನಗರದಲ್ಲಿ ಪತ್ತೆಯಾಗಿದೆ. ಮೂವರು ಹೆಣ್ಣುಮಕ್ಕಳ ಮೃತದೇಹಗಳು ಬೆಡ್ಬಾಕ್ಸ್ನ ಒಳಗೆ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಲಿಸಾಡಿ ಗೇಟ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆಗೆ ಬೀಗ ಜಡಿದಿದ್ದು, ಕರೆಗಳಿಗೂ ಕುಟುಂಬದವರು ಸ್ಪಂದಿಸದೇ ಇದ್ದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಮೀರತ್ ಎಸ್ಎಸ್ಪಿ ವಿಪಿನ್ ತಾಡಾ ವಿವರಿಸಿದ್ದಾರೆ.
ಮನೆಗೆ ಹೊರಗಿನಿಂದ ಬೀಗ ಜಡಿಯಲಾಗಿದ್ದು, ಛಾವಣಿ ಮೂಲಕ ಒಳಹೊಕ್ಕು ನೋಡಿದಾಗ ಮೊಯಿನ್, ಅವರ ಪತ್ನಿ ಆಸ್ಮಾ ಅವರ ಹೆಣ್ಣುಮಕ್ಕಳಾದ ಆಫ್ಸಾ (8), ಅಝೀಝ್ (4) ಮತ್ತು ಅಬಿದಾ (1) ಅವರ ಶವ ಪತ್ತೆಯಾಯಿತು ಎಂದು ತಾಡಾ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಮನೆಗೆ ಬೀಗ ಜಡಿದಿರುವುದನ್ನು ನೋಡಿದರೆ ಕುಟುಂಬಕ್ಕೆ ಪರಿಚಿತರಾದವರೇ ಈ ಕೃತ್ಯ ಎಸಗಿರಬೇಕು ಎಂಬ ಅನುಮಾನ ಬರುತ್ತದೆ ಎಂದು ಅವರು ಹೇಳಿದ್ದಾರೆ. ಹಳೆ ವೈಷಮ್ಯದಿಂದ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಪ್ರಗತಿಯಲ್ಲಿದೆ.
ಮೃತ ವ್ಯಕ್ತಿಯ ಕಾಲುಗಳನ್ನು ಬೆಡ್ಶೀಟ್ಗಳಿಂದ ಬಿಗಿಯಲಾಗಿತ್ತು ಎಂದು ಅವರು ಹೇಳಿದ್ದಾರೆ. ವಿಧಿವಿಜ್ಞಾನ ಅಧಿಕಾರಿಗಳು ಮತ್ತು ಹಿರಿಯ ತನಿಖಾಧಿಕಾರಿಗಳು ಘಟನೆ ಸ್ಥಳದಿಂದ ಪುರಾವೆ ಸಂಗ್ರಹಿಸುತ್ತಿದ್ದಾರೆ.