ಬಿಯಾಂತ್ ಸಿಂಗ್ ಹತ್ಯೆ ಪ್ರಕರಣ | ರಜೋನಾ ಕ್ಷಮಾದಾನ ಅರ್ಜಿಯ ಬಗ್ಗೆ 2 ವಾರಗಳಲ್ಲಿ ನಿರ್ಧರಿಸಿ : ರಾಷ್ಟ್ರಪತಿಗಳಿಗೆ ಸುಪ್ರೀಂ ಕೋರ್ಟ್ ಆಗ್ರಹ

Update: 2024-11-18 16:13 GMT

ಬಿಯಾಂತ್ ಸಿಂಗ್

ಹೊಸದಿಲ್ಲಿ : 1995ರಲ್ಲಿ ಪಂಜಾಬಿನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಅಪರಾಧಿಗಳ ಪೈಕಿ ಮಾಜಿ ಪೋಲಿಸ್ ಕಾನ್ಸ್ಟೇಬಲ್ ಬಲವಂತ ಸಿಂಗ್ ರಜೋನಾ ಸಲ್ಲಿಸಿರುವ ಕ್ಷಮಾದಾನ ಅರ್ಜಿಯ ಬಗ್ಗೆ ಎರಡು ವಾರಗಳಲ್ಲಿ ನಿರ್ಧರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಗ್ರಹಿಸಿದೆ.

ಈ ಗಡುವಿನೊಳಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ರಜೋನಾನ ಮಧ್ಯಂತರ ಪರಿಹಾರ ಮನವಿಗಳನ್ನು ಸರ್ವೋಚ್ಚ ನ್ಯಾಯಾಲಯವು ಪರಿಗಣಿಸಲಿದೆ.

‘ಮುಂದಿನ ವಿಚಾರಣಾ ದಿನವಾದ ಡಿ.5ರೊಳಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದಿದ್ದರೆ ಮಧ್ಯಂತರ ಪರಿಹಾರಕ್ಕಾಗಿ ಮನವಿಯನ್ನು ನಾವು ಪರಿಗಣಿಸುತ್ತೇವೆ ’ ಎಂದು ನ್ಯಾ.ಬಿ.ಆರ್.ಗವಾಯಿ ನೇತೃತ್ವದ ಪೀಠವು ತಿಳಿಸಿತು.

ರಜೋನಾ ಪರ ಹಾಜರಾಗಿದ್ದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು, ಕೇಂದ್ರ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಈ ಆದೇಶ ಹೊರಬಿದ್ದಿದೆ. ರಜೋನಾ ಕ್ಷಮಾದಾನ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರವು ಈವರೆಗೆ ಉತ್ತರಿಸಿಲ್ಲ ಎಂದು ಪಂಜಾಬ್ ಸರಕಾರವೂ ನ್ಯಾಯಾಲಯಕ್ಕೆ ತಿಳಿಸಿತು.

1995, ಆ.31ರಂದು ಚಂಡಿಗಡದಲ್ಲಿನ ಸಚಿವಾಲಯದ ಹೊರಗೆ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಬಿಯಾಂತ್ ಸಿಂಗ್ ಮತ್ತು ಇತರ 16 ಜನರು ಕೊಲ್ಲಲ್ಪಟ್ಟಿದ್ದರು.

ರಜೋನಾ ಮರಣದಂಡನೆಗೆ ಗುರಿಯಾಗಿರುವುದನ್ನು ಗಮನಕ್ಕೆ ತೆಗೆದುಕೊಂಡ ಸರ್ವೋಚ್ಚ ನ್ಯಾಯಾಲಯವು ಎರಡು ವಾರಗಳಲ್ಲಿ ನಿರ್ಧರಿಸುವಂತೆ ಮನವಿಯೊಂದಿಗೆ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳ ಮುಂದೆ ಮಂಡಿಸುವಂತೆ ಅವರ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿತು.

ತನ್ನ ಕ್ಷಮಾದಾನ ಅರ್ಜಿಯ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸುದೀರ್ಘ ವಿಳಂಬವು ತನ್ನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ರಜೋನಾ ಅರ್ಜಿಯಲ್ಲಿ ತಿಳಿಸಿದ್ದಾನೆ.

ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಇನ್ನೋರ್ವ ಅಪರಾಧಿ ದೇವೇಂದ್ರ ಪಾಲ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯ ಬಗ್ಗೆ ಈಗಾಗಲೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ರೋಹಟ್ಗಿ, ಅರ್ಜಿ ನಿರ್ಧಾರದಲ್ಲಿ ಸುದೀರ್ಘ ವಿಳಂಬವು ತನ್ನ ಕಕ್ಷಿದಾರನ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಲು ಸಕಾರಣವಾಗಿದೆ ಎಂದು ವಾದಿಸಿದರು.

ರಜೋನಾನ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ತಗ್ಗಿಸಲು ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷ ನಿರಾಕರಿಸಿತ್ತಾದರೂ, ವಿಷಯವನ್ನು ಹೊಸದಾಗಿ ಮರುಪರಿಶೀಲಿಸಲು 2024, ಸೆ.25ರಂದು ಒಪ್ಪಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News