ಬೇಡುವುದೇ ವೃತ್ತಿ : ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭರತ್ ಜೈನ್

Update: 2024-12-10 15:23 GMT

ಭರತ್ ಜೈನ್  | PC : X

ಮುಂಬೈ : ಬಡತನದಲ್ಲಿ ಹುಟ್ಟಿ ಅದನ್ನೇ ಹೊದ್ದುಕೊಂಡು ಬೆಳೆದ, ಶಿಕ್ಷಣದ ಗಂಧಗಾಳಿಯೇ ಇಲ್ಲದ, ತಲೆಯ ಮೇಲೆ ಸೂರೂ ಇಲ್ಲದಿದ್ದ ಭರತ ಜೈನ್ ಇಂದು 7.5 ಕೋ.ರೂ.ನಿವ್ವಳ ಮೌಲ್ಯವನ್ನು ಹೊಂದಿದ್ದಾನೆ.

ತನ್ನದೆನ್ನುವುದು ಏನೂ ಇಲ್ಲದೆ ಬೆಳೆದಿದ್ದ 54ರ ಹರೆಯದ ಈ ವ್ಯಕ್ತಿ ಇಷ್ಟೊಂದು ಅಗಾಧ ಆದಾಯವನ್ನು ಹೊಂದಿದ್ದಾದರೂ ಹೇಗೆ? ಭಿಕ್ಷೆ ಬೇಡುವ ಮೂಲಕ!

ಸ್ವಯಂಘೋಷಿತ ಕೋಟ್ಯಧಿಪತಿ ಜೈನ ತನ್ನ ಕುಟುಂಬವು ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದೆ ಎನ್ನುವುದನ್ನು ಅರಿತಾಗ ಎಳೆಯ ವಯಸ್ಸಿನಲ್ಲಿಯೇ ಭಿಕ್ಷಾಟನೆಯನ್ನು ಆರಂಭಿಸಿದ್ದ. ಪ್ರೌಢಾವಸ್ಥೆಯಲ್ಲಿಯೂ ಈ ವೃತ್ತಿ ಅವನನ್ನು ಅನುಸರಿಸಿತ್ತು ಮತ್ತು ಅದನ್ನೇ ಆತ ತನ್ನ ಆದಾಯದ ಮುಖ್ಯ ಮೂಲವನ್ನಾಗಿ ಮಾಡಿಕೊಂಡಿದ್ದ.

ಹೆಚ್ಚು ಜನರು ಓಡಾಡುವ ಛತ್ರಪತಿ ಶಿವಾಜಿ ಮಹಾರಾಜ ರೈಲುನಿಲ್ದಾಣ ಮತ್ತು ಆಝಾದ್ ಮೈದಾನ ಸೇರಿದಂತೆ ಮುಂಬೈನ ಆಯಕಟ್ಟಿನ ಸ್ಥಳಗಳಲ್ಲಿ ಜೈನ ಭಿಕ್ಷಾಟನೆ ಮಾಡುತ್ತಾನೆ. ವರದಿಗಳ ಪ್ರಕಾರ ಬಿಡುವಿಲ್ಲದೆ 10-12 ಗಂಟೆಗಳ ಕಾಲ ‘ದುಡಿಯುವ’ ಆತ ದಿನವೊಂದಕ್ಕೆ 2,000 ರೂ.ಗಳಿಂದ 2,500 ರೂ.ವರೆಗೂ ಗಳಿಸುತ್ತಾನೆ. ಭಿಕ್ಷಾಟನೆಯಿಂದ ಆತನ ಮಾಸಿಕ ಆದಾಯ 60,000 ರೂ.ಗಳಿಂದ 75,000 ರೂ.ವರೆಗಿದೆ.

ತನ್ನ 40 ವರ್ಷಗಳ ಭಿಕ್ಷಾಟನೆ ವೃತ್ತಿಯಲ್ಲಿ ಜೈನ 7.5 ಕೋ.ರೂ.ಗಳ ಸಂಪತ್ತು ಗಳಿಸಿದ್ದಾನೆ. ಈಗ ಆತ ತಾನು ಎಂದೂ ಅನುಭವಿಸಿರದ ಐಷಾರಾಮಿ ಜೀವನ ಶೈಲಿಯನ್ನು ತನ್ನ ಕುಟುಂಬಕ್ಕೆ ಒದಗಿಸಿದ್ದಾನೆ. ಮುಂಬೈನಲ್ಲಿ 1.4 ಕೋ.ರೂ.ಮೌಲ್ಯದ 2 ಬಿಎಚ್‌ಕೆ ಫ್ಲ್ಯಾಟ್ ಹೊಂದಿರುವ ಜೈನ್ ಅಲ್ಲಿ ತನ್ನ ಪತ್ನಿ,ಇಬ್ಬರು ಪುತ್ರರು,ತಂದೆ ಮತ್ತು ಸೋದರನೊಂದಿಗೆ ವಾಸವಾಗಿದ್ದಾನೆ. ಥಾಣೆಯಲ್ಲಿಯೂ ಆತ ಎರಡು ಅಂಗಡಿಗಳ ಒಡೆತನವನ್ನು ಹೊಂದಿದ್ದು,ಮಾಸಿಕ 30,000 ರೂ.ಬಾಡಿಗೆಯನ್ನು ಗಳಿಸುತ್ತಿದ್ದಾನೆ.

ಇಷ್ಟು ಮಾತ್ರವಲ್ಲ,ಆತನ ಕುಟುಂಬವು ಸ್ಟೇಷನರಿ ಅಂಗಡಿಯೊಂದನ್ನೂ ಹೊಂದಿದ್ದು ಅದು ಆದಾಯವನ್ನು ಹೆಚ್ಚಿಸಿದೆ. ಪ್ರತಿಷ್ಠಿತ ಕಾನ್ವೆಂಟ್ ಶಾಲೆಗಳಲ್ಲಿ ಓದಿರುವ ಆತನ ಇಬ್ಬರು ಪುತ್ರರು ಈಗ ಕುಟುಂಬ ವ್ಯವಹಾರಕ್ಕೆ ನೆರವಾಗುತ್ತಿದ್ದಾರೆ. ಓರ್ವ ಭಿಕ್ಷುಕ ಕನಸು ಕಾಣುವ ಎಲ್ಲವನ್ನೂ ಹೊಂದಿದ್ದರೂ, ಈಗ ಹೆಚ್ಚುವರಿ ಆದಾಯಕ್ಕಾಗಿ ಇತರ ಅವಕಾಶಗಳನ್ನು ಸೃಷ್ಟಿಸಿಕೊಂಡಿದ್ದರೂ ಜೈನ್ ತನ್ನ ಮನೆಯವರು ವಿರೋಧಿಸುತ್ತಿದ್ದರೂ ಭಿಕ್ಷಾಟನೆಯನ್ನು ಬಿಟ್ಟಿಲ್ಲ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜೈನ,ಭಿಕ್ಷೆ ಬೇಡುವುದನ್ನು ತಾನು ಆನಂದಿಸುತ್ತೇನೆ ಮತ್ತು ಸದ್ಯೋಭವಿಷ್ಯದಲ್ಲಿ ಅದನ್ನು ತೊರೆಯುವ ಆಲೋಚನೆ ತನಗಿಲ್ಲ ಎಂದು ಹೇಳಿದ್ದಾನೆ. ಭಿಕ್ಷೆ ಬೇಡಿ ಗಳಿಸುವ ಹಣದ ವಿಷಯದಲ್ಲಿ ತಾನು ಉದಾರಿಯಾಗಿದ್ದೇನೆ ಎಂದು ಹೇಳಿಕೊಂಡಿರುವ ಜೈನ,ತಾನು ದುರಾಸೆಯ ವ್ಯಕ್ತಿಯಲ್ಲ. ದತ್ತಿಸಂಸ್ಥೆಗಳಿಗೆ ಮತ್ತು ದೇವಸ್ಥಾನಗಳಿಗೆ ಹಣವನ್ನು ದಾನ ಮಾಡುತ್ತೇನೆ ಎಂದು ತಿಳಿಸಿದ್ದಾನೆ.

ಅಂದ ಹಾಗೆ ಕೋಟ್ಯಧಿಪತಿ ಭಿಕ್ಷುಕ ಜೈನ ಒಬ್ಬನೇ ಅಲ್ಲ. 2019ರಲ್ಲಿ ರೈಲು ಅಪಘಾತದಲ್ಲಿ ಮೃತಪಟ್ಟ ಭಿಕ್ಷುಕ ಬುರ್ಜು ಚಂದ್ರ ಆಝಾದ್ ಕೂಡ ಸಂಪತ್ತನ್ನು ಗುಡ್ಡೆ ಹಾಕಿದ್ದ. ಆತ 8.77 ಲ.ರೂ.ಗಳ ನಿರಖು ಠೇವಣಿಯ ಜೊತೆಗೆ ಸುಮಾರು 1.5 ಲ.ರೂ.ನಗದನ್ನೂ ಹೊಂದಿದ್ದ. ಲಕ್ಷ್ಮಿ ದಾಸ್,ಕೃಷ್ಣಕುಮಾರ ಗೀತೆ ಮತ್ತು ಪಪ್ಪು ಕುಮಾರ ಕೂಡ ಶ್ರೀಮಂತ ಭಿಕ್ಷುಕರ ಸಾಲಿನಲ್ಲಿ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News