ಬೆಳಗಾವಿ ಮಹಿಳೆಯ ವಿವಸ್ತ್ರಗೊಳಿಸಿದ ಪ್ರಕರಣ; ಕರ್ನಾಟಕ ಸರಕಾರ, ಡಿಜಿಪಿಗೆ NHRC ನೋಟಿಸ್
ಹೊಸದಿಲ್ಲಿ: ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ 42 ವರ್ಷ ವಯಸ್ಸಿನ ಮಹಿಳೆಯೋರ್ವರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಹಾಗೂ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕರ್ನಾಟಕ ಸರಕಾರ ಹಾಗೂ ರಾಜ್ಯ ಪೊಲೀಸ್ ವರಿಷ್ಠರಿಗೆ ನೋಟಿಸು ಜಾರಿ ಮಾಡಿದೆ.
ವರದಿಯಾಗಿರುವ ಈ ಕ್ಯತ್ಯವು ಪಿತೃ ಪ್ರಧಾನತೆಯನ್ನು ಪ್ರತಿಬಿಂಬಿಸಿದೆ. ಇದು ಸಂತ್ರಸ್ತೆಯ ಘನತೆಯಿಂದ ಬದುಕುವ ಹಕ್ಕಿನ ಉಲ್ಲಂಘನೆಯ ಸ್ಪಷ್ಟ ನಿದರ್ಶನವಾಗಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನ್ನ ಹೇಳಿಕೆಯಲ್ಲಿ ಅಭಿಪ್ರಾಯಿಸಿದೆ.
ಈ ಘಟನೆ ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಡಿಸೆಂಬರ್ 11ರಂದು ನಡೆದಿದೆ. ಮಹಿಳೆಯ ಪುತ್ರ ಅದೇ ಗ್ರಾಮದ ಯುವತಿಯೊಂದಿಗೆ ಓಡಿ ಹೋಗಿದ್ದ. ಈ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಮಹಿಳೆಯ ಮನೆಗೆ ನುಗ್ಗಿ ಆಕೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ್ದರು. ಅನಂತರ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದರು. ಈ ಘಟನೆ ಕುರಿತ ಡಿಸೆಂಬರ್ 12ರಂದು ಪ್ರಕಟವಾದ ವರದಿಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತವಾಗಿ ಪರಿಗಣನೆಗೆ ತೆಗೆದುಕೊಂಡಿತ್ತು.
ಈ ವರದಿಯ ವಿಷಯ ನಿಜವಾಗಿದ್ದರೆ, ಸಂತ್ರಸ್ತ ಮಹಿಳೆಯ ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ವಿಷಯದ ಕುರಿತು ಪ್ರಶ್ನೆಗಳನ್ನು ಎತ್ತುತ್ತದೆ. ಸಮಾಜದ ದುರ್ಬಲ ವರ್ಗಗಳನ್ನು, ಮುಖ್ಯವಾಗಿ ಮಹಿಳೆ, ಮಕ್ಕಳು ಹಾಗೂ ವೃದ್ಧರನ್ನು ರಕ್ಷಿಸುವುದು ರಾಜ್ಯದ ಕರ್ತವ್ಯವಾಗಿದೆ ಎಂದು ಅದು ಅಭಿಪ್ರಾಯಿಸಿದೆ.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಡಿಜಿಪಿಗೆ ನೋಟಿಸು ಜಾರಿ ಮಾಡಿದೆ ಹಾಗೂ ನಾಲ್ಕು ವಾರಗಳ ಒಳಗೆ ವಿಸ್ತೃತ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.