ಭಾರ್ತಿ ಗ್ರೂಪ್ ಬಿಜೆಪಿಗೆ 150 ಕೋಟಿ ರೂ. ಕೊಟ್ಟಿದ್ದಕ್ಕೂ ಮೋದಿ ಸರಕಾರದ ಟೆಲಿಕಾಂ ನೀತಿಯ ಯೂಟರ್ನ್ ಗೂ ಏನಿದೆ ನಂಟು ?
ಟೆಲಿಕಾಂ ವಲಯದಲ್ಲಿ ಬಿಜೆಪಿ ಸರ್ಕಾರ ಕೊಟ್ಟ ಅತಿ ಮಹತ್ವದ ಅವಕಾಶವೊಂದರ ಋಣ ಸಂದಾಯದ ಭಾಗವಾಗಿ ಭಾರ್ತಿ ಗ್ರೂಪ್ ಬಿಜೆಪಿಗೆ ಚುನಾವಣಾ ಬಾಂಡ್ ಗಳ ಖರೀದಿ ಮೂಲಕ 150 ಕೋಟಿ ದೇಣಿಗೆ ನೀಡಿತೆ?
ಇಂಥದೊಂದು ಪ್ರಶ್ನೆ, ಈಗ ಬಯಲಾಗಿರುವ ಚುನಾವಣಾ ಬಾಂಡ್ಗಳ ಕುರಿತ ವಿವರಗಳಿಂದಾಗಿ ಎದ್ದಿದೆ. ಈ ಬಗ್ಗೆ Newslaundry, Scroll, The News Minute ಹಾಗೂ ಸ್ವತಂತ್ರ ಪತ್ರಕರ್ತರ ಸಹಯೋಗದಲ್ಲಿ ಮಾಡಿರುವ ತನಿಖಾ ವರದಿಯೊಂದು ಕುತೂಹಲಕಾರಿ ಕಥೆಯನ್ನು ಹೇಳಿದೆ.
ರಾಗಮಾಲಿಕಾ ಕಾರ್ತಿಕೇಯನ್, ಆನಂದ್ ಮಂಗ್ನಾಲೆ ಹಾಗೂ ನೀಲ್ ಮಾಧವ್ ಅವರ ವರದಿಯ ಪ್ರಮುಖ ಅಂಶಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ:
2012ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಂಜೂರು ಮಾಡಿದ್ದ 122 ಟೆಲಿಕಾಂ ಪರವಾನಗಿಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಮತ್ತು ಕಡ್ಡಾಯ ಹರಾಜು ಪ್ರಕ್ರಿಯೆಗೆ ಆದೇಶಿಸಿತ್ತು. 2ಜಿ ಸ್ಪೆಕ್ಟ್ರಮ್ ಹಗರಣ ಸಂಬಂಧದ ಸುಪ್ರೀಂ ಕೋರ್ಟ್ ನ ಆ ತೀರ್ಪು, ಭ್ರಷ್ಟಾಚಾರದ ವಿರುದ್ಧದ ನಿರ್ಣಾಯಕ ಹೊಡೆತ ಎಂದೇ ಆಗ ಮಾಧ್ಯಮಗಳು ಬಣ್ಣಿಸಿದ್ದವು.
ಆಗ ಎದ್ದ ಭ್ರಷ್ಟಾಚಾರ ವಿರೋಧಿ ಆಂದೋಲನದ ಅಲೆ ಯುಪಿಎ ಸರ್ಕಾರವನ್ನು ಕೊಚ್ಚಿಕೊಂಡು ಹೋಯಿತಲ್ಲದೆ ಮೋದಿ ಅಧಿಕಾರಕ್ಕೇರುವುದಕ್ಕೆ ದಾರಿ ಮಾಡಿಕೊಟ್ಟಿತು. ಅದಾಗಿ ದಶಕದ ಬಳಿಕ ಮೋದಿ ಸರ್ಕಾರ ಬ್ರಾಡ್‌ಬ್ಯಾಂಡ್ ಸೇವೆ ನೀಡಲು ಉಪಗ್ರಹ ಬಳಸುವ ಮೂಲಕ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿತು.
ಆದರೆ ಸ್ಪೆಕ್ಟ್ರಮ್ ಹಂಚಿಕೆ ವಿಚಾರ ಬಂದಾಗ ಮೋದಿ ಸರ್ಕಾರ ಮಾಡಿದ್ದೇನು? 2012ರ ಸುಪ್ರೀಂ ಕೋರ್ಟ್‌ನ ಸ್ಪೆಕ್ಟ್ರಮ್‌ನ ಕಡ್ಡಾಯ ಹರಾಜು ಆದೇಶದ ಹೊರತಾಗಿಯೂ, ಅವತ್ತು ಯುಪಿಎ ಸರ್ಕಾರ ಮಾಡಿದಂತೆ ಮೋದಿ ಸರ್ಕಾರ ಕೂಡ ವಿವೇಚನೆ ಬಳಸಿ ಸ್ಪೆಕ್ಟ್ರಮ್ ವಿತರಿಸುವ ಕ್ರಮವನ್ನೇ ಅನುಸರಿಸಿತು. ಹರಾಜು ಅಗತ್ಯವಿಲ್ಲದೆ ಬರೀ ಒಂದು ಆದೇಶದ ಮೂಲಕ ಸ್ಪೆಕ್ಟ್ರಮ್ ಹಂಚಿಕೆಗೆ ಅವಕಾಶ ಮಾಡಿಕೊಡುವ 2023ರ ಹೊಸ ಟೆಲಿಕಾಂ ನೀತಿಯಂತೆ ಸ್ಪೆಕ್ಟ್ರಮ್‌ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಪರವಾನಗಿ ಮತ್ತು ಸ್ಪೇಸ್ ಅಥಾರೈಸೇಷನ್ ಎರಡನ್ನೂ ಪಡೆದ ಏಕೈಕ ಕಂಪನಿ ಎಂದರೆ ಒನ್ ವೆಬ್ ಇಂಡಿಯಾ.
ಇದು ಅಂತರರಾಷ್ಟ್ರೀಯ ಉಪಗ್ರಹ ಕಂಪನಿಯಾದ ಯೂಟೆಲ್ಸ್ಯಾಟ್ ಒನ್ ವೆಬ್ ನ (Eutelsat OneWeb) ಭಾರತೀಯ ಅಂಗಸಂಸ್ಥೆಯಾಗಿದ್ದು, ಲಂಡನ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ.
ಯೂಟೆಲ್ಸ್ಯಾಟ್ ಒನ್ ವೆಬ್ ನ ಅತಿದೊಡ್ಡ ಷೇರುದಾರ ಸಂಸ್ಥೆಯೆಂದರೆ, ಟೆಲಿಕಾಂ ಸೇವೆ ಪೂರೈಸುವ ಏರ್‌ಟೆಲ್‌ನ ಮಾತೃಸಂಸ್ಥೆಯಾದ ಭಾರ್ತಿ ಎಂಟರ್‌ಪ್ರೈಸಸ್. ಇದು ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆ. ಟೆಲಿಕಾಂ, ಡಿಜಿಟಲ್ ಮೂಲಸೌಕರ್ಯ, ಬಾಹ್ಯಾಕಾಶ ಸಂವಹನ, ಹಣಕಾಸು ಸೇವೆಗಳು ಮತ್ತು ರಿಯಲ್ ಎಸ್ಟೇಟ್‌ನಂತಹ ವಿವಿಧ ಕ್ಷೇತ್ರಗಲ್ಲಿ ಈ ಕಂಪನಿಯ ಬಾಹುಗಳು ಚಾಚಿಕೊಂಡಿವೆ.
ದೂರಸಂಪರ್ಕ ಇಲಾಖೆಯಿಂದ ಸ್ಯಾಟಲೈಟ್ ಅಥವಾ GMPCS (Global Mobile Personal Communications by Satellite) ಪರವಾನಗಿಯನ್ನು ಒನ್ ವೆಬ್ 2021ರ ಆಗಸ್ಟ್ 24ರಂದು ಪಡೆದಿದ್ದು, ಅಂಥ ಪರವಾನಗಿ ಪಡೆದಿರುವ ಮೊದಲ ಕಂಪನಿಯಾಗಿದೆ.
2023ರ ನವೆಂಬರ್ 21ರಂದು ಅದು ಉಪಗ್ರಹ ಸಾಮರ್ಥ್ಯದ ಬಳಕೆಗಾಗಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ದೃಢೀಕರಣ ಕೇಂದ್ರದಿಂದ ಅನುಮತಿ ಪಡೆದಿದೆ. ಮತ್ತದು ಈವರೆಗೂ ಇಂಥ ಅನುಮತಿ ಪಡೆದ ಏಕೈಕ ಕಂಪನಿಯಾಗಿದೆ.
ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗಳಿಗಾಗಿ ಸ್ಪೆಕ್ಟ್ರಮ್‌ಗೆ ಅರ್ಜಿ ಸಲ್ಲಿಸಲು ಈ ಎರಡು ಹಂತಗಳು ಅತ್ಯಗತ್ಯ. ಹೀಗಾಗಿಯೇ, ಅಂತಿಮ ಸ್ಪೆಕ್ಟ್ರಮ್ ಅಥಾರೈಸೇಷನ್ ಸಿಕ್ಕ ಕೂಡಲೇ ವಾಣಿಜ್ಯ ಸೇವೆ ಆರಂಭಿಸುವುದಾಗಿ ಅದು ಹೇಳಿಕೊಂಡಿದೆ.
ಇದಿಷ್ಟು ಒಂದು ಭಾಗವಾದರೆ, ಕಥೆಯ ಇನ್ನೊಂದು ಭಾಗ ಬಹಳ ಕುತೂಹಲಕಾರಿ. ಉಪಗ್ರಹ ಸ್ಪೆಕ್ಟ್ರಮ್ ಅನ್ನು ಸರ್ಕಾರ ಇನ್ನೂ ಹಂಚಿಕೆ ಮಾಡಬೇಕಿದೆ. ಅದರ ನಡುವೆಯೇ ಚುನಾವಣಾ ಬಾಂಡ್‌ಗಳ ವಿವರಗಳಿಂದ ಒಂದು ಮಹತ್ವದ ವಿಚಾರ ಬಯಲಾಗಿದೆ. ಹರಾಜಿನ ಅಗತ್ಯವಿಲ್ಲದೆ ಉಪಗ್ರಹ ಸ್ಪೆಕ್ಟ್ರಮ್ ಹಂಚಿಕೆಗೆ ಅವಕಾಶವಿರುವ ಹೊಸ ಕಾನೂನನ್ನು ಸರ್ಕಾರ ತರುವುದಕ್ಕೆ ಮೊದಲು ಮತ್ತು ಸ್ಪೆಕ್ಟ್ರಮ್ ಅಥಾರೈಸೇಷನ್ ಸಿಕ್ಕ ಬರೀ ಒಂದು ತಿಂಗಳ ನಂತರ ಹೀಗೆ ಎರಡು ಬಾರಿ ಬಾಂಡ್‌ಗಳ ಖರೀದಿ ಮೂಲಕ ಭಾರ್ತಿ ಗ್ರೂಪ್ ಬಿಜೆಪಿಗೆ 150 ಕೋಟಿ ರೂ. ದೇಣಿಗೆ ನೀಡಿದೆ.
ಭಾರ್ತಿ ಗ್ರೂಪ್ ಚುನಾವಣಾ ಬಾಂಡ್ ಖರೀದಿ ಮೂಲಕ ಬಿಜೆಪಿಗೆ ದೇಣಿಗೆ ನೀಡಿರುವುದು ಯೂಟೆಲ್ಸ್ಯಾಟ್ ಒನ್ ವೆಬ್ ಗೆ ಗೊತ್ತಿದೆಯೆ? ಗೊತ್ತಿರುವುದೇ ಹೌದಾದರೆ ಇಂಗ್ಲೆಂಡಿನ ಲಂಚ ಕಾಯ್ದೆಯಡಿಯಲ್ಲಿ ಅದು ಮಾಡಿರುವುದು ಗಂಭೀರ ಅಪರಾಧವಾಗಲಿದ್ದು, ಈಗ ಬಯಲಾಗಿರುವ ಸತ್ಯ ವಿದೇಶಗಳಲ್ಲಿ ವ್ಯಾಪಕ ಪರಿಣಾಮ ಬೀರಲಿರುವ ಸಾಧ್ಯತೆ ಬಗ್ಗೆ ತಜ್ಞರು ಹೇಳುತ್ತಿದ್ದಾರೆ.
ಉಪಗ್ರಹ ಸ್ಪೆಕ್ಟ್ರಮ್‌ಗಾಗಿ ರಿಲಯನ್ಸ್ ಜಿಯೊದಂಥ ಭಾರತದ ಟೆಲಿಕಾಂ ದೈತ್ಯ ಸಂಸ್ಥೆಯಿಂದ ಹಿಡಿದು ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್‌ನಂತಹ ವಿದೇಶಿ ಕಂಪನಿಗಳವರೆಗೆ ಹಲವಾರು ಸಂಸ್ಥೆಗಳು ಪೈಪೋಟಿಯಲ್ಲಿವೆ.
ಸ್ಪೆಕ್ಟ್ರಮ್ ಹಂಚಿಕೆ ಹೇಗಿರಬೇಕೆಂದು 2023ರ ಎಪ್ರಿಲ್ ನಲ್ಲಿ ಮೋದಿ ಸರ್ಕಾರ ಸಾರ್ವಜನಿಕ ಸಲಹೆ ಆಹ್ವಾನಿಸಿದ್ದಾಗ ರಿಲಯನ್ಸ್ ಜಿಯೋ ಮತ್ತು ವೊಡಾಫೋನ್ ಇಂಡಿಯಾ ಈ ಎರಡು ಕಂಪನಿಗಳು ಹರಾಜು ಪ್ರಕ್ರಿಯೆ ಬಗ್ಗೆ ಹೇಳಿದ್ದವು. ಆದರೆ ಭಾರ್ತಿ, ಅಮೆಝಾನ್ ಮತ್ತು ಸ್ಟಾರ್ಲಿಂಕ್ ಸೇರಿದಂತೆ ಇತರ ಅನೇಕ ಕಂಪನಿಗಳು ಹರಾಜು ಪ್ರಕ್ರಿಯೆಗೆ ವಿರುದ್ಧ ಇದ್ದವು. ಉಪಗ್ರಹ ಸ್ಪೆಕ್ಟ್ರಮ್ ಹರಾಜು ಸಮಂಜಸ ಅಥವಾ ನ್ಯಾಯೋಚಿತವಲ್ಲ ಎಂಬುದು ಭಾರ್ತಿ ಗ್ರೂಪ್ ವಾದವಾಗಿದ್ದರೆ, ಯಾವುದೇ ಕಂಪನಿಯ ಆದ್ಯತೆಗೆ ಮಣಿಯದೆಯೆ, ಸ್ಪೆಕ್ಟ್ರಮ್ ಹಂಚಿಕೆಯಲ್ಲಿನ ನಿಯಮಗಳು ಏಕರೂಪ ಮತ್ತು ನ್ಯಾಯಯುತವಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ನಿರ್ಣಾಯಕ ಎಂದು ರಿಲಯನ್ಸ್ ಜಿಯೊ ಹೇಳಿತ್ತು.
ಮತ್ತೂ ಒಂದು ಗಮನಾರ್ಹ ಸಂಗತಿಯೆಂದರೆ, ಮಾಧ್ಯಮ ವರದಿಗಳ ಪ್ರಕಾರ, 2ಜಿ ಸ್ಪೆಕ್ಟ್ರಮ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಲ್ಲಿ ಒಬ್ಬರಾದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ನ್ಯಾ.ಕೆಎಸ್ ರಾಧಾಕೃಷ್ಣನ್ ಅವರ ಕಾನೂನು ಅಭಿಪ್ರಾಯವನ್ನು ಕೂಡ ರಿಲಯನ್ಸ್ ಸಲ್ಲಿಸಿತ್ತು ಎನ್ನಲಾಗಿದೆ.
ಹರಾಜು ಪ್ರಕ್ರಿಯೆಯೇ ಉಪಗ್ರಹ ಆಧಾರಿತ ಸಂವಹನಕ್ಕಾಗಿ ಸ್ಪೆಕ್ಟ್ರಮ್ ಹಂಚಿಕೆಗೆ ಅನುಮತಿ ನೀಡುವ ಏಕೈಕ ವಿಧಾನ. ಅಲ್ಲದೆ, ಉಪಗ್ರಹ ಮತ್ತು ಟೆರೆಸ್ಟ್ರಿಯಲ್ ಸ್ಪೆಕ್ಟ್ರಮ್ ನಡುವೆ ಯಾವುದೇ ಸ್ಪಷ್ಟವಾದ ವ್ಯತ್ಯಾಸವಿಲ್ಲ ಎಂದು ನ್ಯಾ. ರಾಧಾಕೃಷ್ಣನ್ ಹೇಳಿದ್ದರು. ಆದರೆ, ಅವರ ಅಭಿಪ್ರಾಯವನ್ನಾಗಲೀ, ಸ್ಪೆಕ್ಟ್ರಂ ಕಡ್ಡಾಯ ಹರಾಜು ಕುರಿತ ಸುಪ್ರೀಂ ಕೋರ್ಟ್ ಆದೇಶವನ್ನಾಗಲೀ ಮೋದಿ ಸರ್ಕಾರ ಪರಿಗಣಿಸಲೇ ಇಲ್ಲ.
ಬಿಜೆಪಿಗೆ ಭಾರ್ತಿ ಗ್ರೂಪ್ ನೀಡಿರುವ ರೂ. 150 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಖರೀದಿ ವಿವರಗಳನ್ನು ಗಮನಿಸುವುದಾದರೆ, 2023ರ ನವೆಂಬರ್ 9ರಂದು, ಭಾರ್ತಿ ಏರ್‌ಟೆಲ್ ಲಿಮಿಟೆಡ್ 100 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿತು ಮತ್ತು ಪೂರ್ಣ ಮೊತ್ತವನ್ನು ಬಿಜೆಪಿಗೆ ನೀಡಿತು. ನಾಲ್ಕು ದಿನಗಳ ನಂತರ, ನವೆಂಬರ್ 13ರಂದು, ಬಿಜೆಪಿ ಎಲ್ಲಾ ಬಾಂಡ್‌ಗಳನ್ನು ನಗದೀಕರಿಸಿತು. ಎಂಟು ದಿನಗಳ ನಂತರ, ನವೆಂಬರ್ 21ರಂದು, ಒನ್ ವೆಬ್ಗೆ ಭಾರತದ ಬಾಹ್ಯಾಕಾಶ ನಿಯಂತ್ರಕದಿಂದ ಸ್ಯಾಟಲೈಟ್ ಅಥಾರೈಸೇಷನ್ ಸಿಕ್ಕಿತು. ಮತ್ತು ಈಗಾಗಲೇ ಹೇಳಿದ ಹಾಗೆ ಅದು ಅಂಥ ಅರ್ಹತೆ ಪಡೆದ ಏಕೈಕ ಕಂಪನಿಯಾಗಿದೆ.
2024ರ ಆರಂಭದಲ್ಲಿಯೇ ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮತ್ತೆ 50 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿತು, ಅದನ್ನು ಬಿಜೆಪಿ ಜನವರಿ 12ರಂದು ನಗದೀಕರಿಸಿದೆ. ವರದಿಗಳು ಹೇಳುವಂತೆ ರಿಲಯನ್ಸ್ ಜಿಯೋ ಕೂಡ 2022ರಲ್ಲಿ ದೂರಸಂಪರ್ಕ ಇಲಾಖೆಯಿಂದ GMPCS ಪರವಾನಗಿ ಪಡೆದಿದ್ದರೂ, ಅದಕ್ಕೆ ಸ್ಪೇಸ್ ಅಥಾರೈಸೇಷನ್ ಮಾತ್ರ ಇನ್ನೂ ಸಿಕ್ಕಿಲ್ಲ.
ಈಗ ಯೂಟೆಲ್ಸ್ಯಾಟ್ ಎಂಬ ಹೆಸರಿನೊಂದಿಗಿರುವ ಒನ್ ವೆಬ್, 2012ರಲ್ಲಿ ಅಮೆರಿಕದ ಉದ್ಯಮಿ ಸ್ಥಾಪಿಸಿದ ಉಪಗ್ರಹ ಕಂಪನಿಯಾಗಿದೆ. ಇದು 2020ರಲ್ಲಿ ದಿವಾಳಿಯಾಗಿರುವುದಾಗಿ ಘೋಷಿಸಿಕೊಂಡ ನಂತರ ಭಾರ್ತಿ ಎಂಟರ್‌ಪ್ರೈಸಸ್ ಮತ್ತು ಇಂಗ್ಲೆಂಡ್ ಸರ್ಕಾರ 100 ಕೋಟಿ ಅಮೆರಿಕನ್ ಡಾಲರ್ ಗೆ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡವು.
2020ರ ನವೆಂಬರ್ನಲ್ಲಿ ಭಾರ್ತಿ ಗ್ಲೋಬಲ್ ಈ ಕಂಪನಿಯಲ್ಲಿ ಶೇ.42ರಷ್ಟು ಪಾಲನ್ನು ಹೊಂದಿತ್ತು. ಇಂಗ್ಲೆಂಡ್ ಸರ್ಕಾರ ಕೂಡ ಶೇ.42ರಷ್ಟು ಪಾಲನ್ನು ಹೊಂದಿತ್ತು. 2021ರ ಜೂನ್ ನಲ್ಲಿ ಫ್ರೆಂಚ್ ಉಪಗ್ರಹ ಸೇವಾ ಪೂರೈಕೆದಾರ ಸಂಸ್ಥೆ ಯೂಟೆಲ್‌ಸ್ಯಾಟ್ ಮತ್ತು ಜಪಾನಿನ ಬಹುರಾಷ್ಟ್ರೀಯ ಕಂಪನಿ ಸಾಫ್ಟ್ಬ್ಯಾಂಕ್ ಪ್ರವೇಶವಾಗುವುದರೊಂದಿಗೆ ಕಂಪನಿಯ ಷೇರುದಾರಿಕೆ ಮಾದರಿ ಬದಲಾಯಿತು.
2023ರ ಸೆಪ್ಟೆಂಬರ್ ನಲ್ಲಿ ಯೂಟೆಲ್ಸ್ಯಾಟ್ ಮತ್ತು ಒನ್ ವೆಬ್ ವಿಲೀನಗೊಂಡವು. ಆ ಬಳಿಕ ಒನ್‌ವೆಬ್ ವಾಣಿಜ್ಯಿಕವಾಗಿ ಕಾರ್ಯನಿರ್ವಹಿಸುವ ಯೂಟೆಲ್‌ಸ್ಯಾಟ್ ಒನ್‌ವೆಬ್ ನ ಒಂದು ಅಂಗಸಂಸ್ಥೆಯಾಗಿ ಉಳಿದಿದೆ. 2024ರ ಮಾರ್ಚ್ 18ರಂದು ಯೂಟೆಲ್ಸ್ಯಾಟ್ ಒನ್ ವೆಬ್ ತನ್ನ ವೆಬ್‌ಸೈಟ್ ನಲ್ಲಿ ಹೇಳಿಕೊಂಡಿರುವ ಪ್ರಕಾರ, ಭಾರತಿ ಗ್ರೂಪ್ ಶೇ.23.8ರಷ್ಟು ಪಾಲುದಾರಿಕೆಯೊಂದಿಗೆ ಯೂಟೆಲ್ಸ್ಯಾಟ್ ಒನ್ ವೆಬ್ನ ಅತಿದೊಡ್ಡ ಷೇರುದಾರ ಕಂಪನಿಯಾಗಿದೆ.
ಇಂಗ್ಲೆಂಡ್ ಸರ್ಕಾರ ಶೇ.10.9ರಷ್ಟು ಪಾಲು ಹೊಂದಿದ್ದರೆ, Bpifrance ಶೇ.13.6ರಷ್ಟು ಮತ್ತು ಸಾಫ್ಟ್ಬ್ಯಾಂಕ್ ಶೇ.10.8ರಷ್ಟು ಪಾಲುದಾರಿಕೆ ಹೊಂದಿವೆ.
ಕಂಪನಿಯ ಮಾಲಿಕತ್ವದ ಈ ಮಾದರಿಯನ್ನು ನೋಡಿಕೊಂಡರೆ, ಭಾರ್ತಿ ಗ್ರೂಪ್ ಬಿಜೆಪಿಗೆ ದೇಣಿಗೆ ನೀಡಿದ್ದು ಯೂಟೆಲ್ಸ್ಯಾಟ್ಗೆ ಗೊತ್ತಿತ್ತು. ಮತ್ತು ಅದು ಹೌದಾದರೆ ಅದು ಹೊಣೆ ಹೊರಲೇಬೇಕಾಗುತ್ತದೆ ಎಂಬುದು ಟ್ರಾನ್ಸ್ಪರೆನ್ಸಿ ಇಂಟರ್‌ನ್ಯಾಶನಲ್‌ನ ಕಾನೂನು ತಜ್ಞ ಕುಶ್ ಅಮೀನ್ ಅಭಿಪ್ರಾಯ.
ಭಾರ್ತಿ ಎಂಟರ್‌ಪ್ರೈಸಸ್ ರಾಜಕೀಯ ಪಕ್ಷಗಳಿಗೆ ದೇಣಿಗೆಯನ್ನು ಚುನಾವಣಾ ಬಾಂಡ್‌ಗಳು ಮತ್ತು ಚುನಾವಣಾ ಟ್ರಸ್ಟ್ ಇವೆರಡರ ಮೂಲಕವೂ ಕೊಟ್ಟಿದೆ. ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಅನ್ನು 2013ರಲ್ಲಿ ಸ್ಥಾಪಿಸಿದ್ದು ಕೂಡ ಭಾರ್ತಿ ಸಮೂಹವೇ. ಆ ಟ್ರಸ್ಟ್ ನ ಅತಿದೊಡ್ಡ ದೇಣಿಗೆಗಳಲ್ಲೂ ಅದರ ಪಾಲಿದೆ.
ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ನಿರಂತರವಾಗಿ ಬಿಜೆಪಿಗೇ ತನ್ನ ಹೆಚ್ಚಿನ ದೇಣಿಗೆಗಳನ್ನು ನೀಡುತ್ತ ಬಂದಿದೆ. 2019ರಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗ ಫ್ರುಡೆಂಟ್ ಸುಮಾರು 218 ಕೋಟಿ ರೂ.ಗಳನ್ನು ಬಿಜೆಪಿಗೆ ಕೊಟ್ಟಿತು. ಆ ವರ್ಷ ಭಾರ್ತಿ ಗ್ರೂಪ್ 27.25 ಕೋಟಿ ರೂ.ಗಳನ್ನು ಪ್ರುಡೆಂಟ್‌ಗೆ ದೇಣಿಗೆ ನೀಡಿತ್ತು. ಅದೇ ವರ್ಷ ಭಾರ್ತಿ ಗ್ರೂಪ್ ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿಗೆ 51.4 ಕೋಟಿ ರೂ., ಜೊತೆಗೆ ಕಾಂಗ್ರೆಸ್‌ಗೆ 8 ಕೋಟಿ ರೂ., ಜೆಡಿಯು ಮತ್ತು ಶಿರೋಮಣಿ ಅಕಾಲಿದಳಕ್ಕೆ ತಲಾ 1 ಕೋಟಿ ರೂ., ನ್ಯಾಷನಲ್ ಕಾನ್ಫರೆನ್ಸ್ಗೆ 50 ಲಕ್ಷ ರೂ., ಆರ್ಜೆಡಿಗೆ 10 ಲಕ್ಷ ರೂ. ನೀಡಿದೆ.
ಅದರ ಮುಂದಿನ ವರ್ಷ ಅಂದರೆ 2020ರಲ್ಲಿ ಭಾರ್ತಿ ಗ್ರೂಪ್ ಪ್ರುಡೆಂಟ್‌ಗೆ 10 ಕೋಟಿ ರೂ. ದೇಣಿಗೆ ನೀಡಿತು, ಆದರೆ ಯಾವುದೇ ಚುನಾವಣಾ ಬಾಂಡ್‌ಗಳನ್ನು ಖರೀದಿಸಿರಲಿಲ್ಲ. 2021 ಮತ್ತು 2022ರಲ್ಲಿ ಬಾಂಡ್‌ಗಳ ಮೂಲಕ ಭಾರ್ತಿ ಗ್ರೂಪ್ ಬಿಜೆಪಿಗೆ ನೀಡಿದ್ದು 35 ಕೋಟಿ ರೂ.
2023ರಲ್ಲಿ ಇದ್ದಕ್ಕಿದ್ದಂತೆ ಅದರ ದೇಣಿಗೆ ಮೊತ್ತ 100 ಕೋಟಿ ರೂ.ಗೆ ಏರಿತು. ಮತ್ತು ಇದಿಷ್ಟೂ ಮೊತ್ತದ ಬಾಂಡ್ಗಳನ್ನು ಯೂಟೆಲ್‌ಸ್ಯಾಟ್ ಒನ್‌ವೆಬ್ನ ಬ್ರಾಡ್‌ಬ್ಯಾಂಡ್ ವ್ಯವಹಾರ ಕುದುರುವುದಕ್ಕೆ ಮೊದಲು ಖರೀದಿಸಲಾಗಿದೆ. ಭಾರ್ತಿ ಎಂಟರ್ಪ್ರೈಸಸ್ ಹೇಗೆ ಯೂಟೆಲ್‌ಸ್ಯಾಟ್ ಒನ್‌ವೆಬ್‌ನ ಅತಿದೊಡ್ಡ ಷೇರುದಾರ ಕಂಪನಿಯೊ ಹಾಗೆಯೆ ಚುನಾವಣಾ ಬಾಂಡ್‌ಗಳ ಅತಿದೊಡ್ಡ ಖರೀದಿದಾರ ಸಂಸ್ಥೆಗಳಲ್ಲಿ ಕೂಡ ಒಂದು ಎಂಬುದು ಕೂಡ ಮತ್ತೊಂದು ಸತ್ಯ.
2019ರಿಂದ 2024ರ ಅವಧಿಯಲ್ಲಿ ಭಾರ್ತಿ ಗ್ರೂಪ್ ನ ಕಂಪನಿಗಳಾದ ಭಾರ್ತಿ ಏರ್‌ಟೆಲ್ ಲಿಮಿಟೆಡ್, ಭಾರ್ತಿ ಇನ್‌ಫ್ರಾಟೆಲ್ ಲಿಮಿಟೆಡ್ ಮತ್ತು ಭಾರ್ತಿ ಟೆಲಿಮೀಡಿಯಾ ಲಿಮಿಟೆಡ್ ಒಟ್ಟು 247 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿವೆ, ಮತ್ತು ಅದರ ಶೇ.95ಕ್ಕಿಂತ ಹೆಚ್ಚು ಪಾಲನ್ನು ಅಂದರೆ 236.4 ಕೋಟಿ ರೂ.ಗಳನ್ನು ಬಿಜೆಪಿಗೆ ದೇಣಿಗೆಯಾಗಿ ನೀಡಿವೆ,