ಬಿಹಾರ: ಕರ್ತವ್ಯದ ವೇಳೆ ಇಂಜಿನ್ ಮತ್ತು ಬೋಗಿ ನಡುವೆ ಸಿಲುಕಿ ರೈಲ್ವೆ ಸಿಬ್ಬಂದಿ ಮೃತ್ಯು !
ಬಿಹಾರ: ಬೇಗುಸರಾಯ್ ಜಿಲ್ಲೆಯ ಬರೌನಿ ಜಂಕ್ಷನ್‌ನಲ್ಲಿ ರೈಲ್ವೆ ಉದ್ಯೋಗಿಯೋರ್ವ ಬೇರ್ಪಡಿಸುವಿಕೆ ಕೆಲಸದ ವೇಳೆ ರೈಲಿನ ಇಂಜಿನ್ ಮತ್ತು ಬೋಗಿಗಳ ನಡುವೆ ಸಿಲುಕಿಕೊಂಡು ಮೃತಪಟ್ಟ ಆಘಾತಕಾರಿ ಘಟನೆ ನಡೆದಿದೆ.
ರೈಲ್ವೆ ಉದ್ಯೋಗಿ ಅಮರ್ ಕುಮಾರ್ ರಾವುತ್ ಮೃತಪಟ್ಟವರು. ಲಕ್ನೋ-ಬರೌನಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 15204ರಲ್ಲಿ ಈ ಅವಘಡ ಸಂಭವಿಸಿದೆ. ರೈಲು ಬರೌನಿ ಜಂಕ್ಷನ್‌ನಲ್ಲಿ ನಿಂತ ಬಳಿಕ ಡಿಕೌಪ್ಲಿಂಗ್ ಮಾಡುವಾಗ ರೈಲು ಚಾಲಕ ಆಕಸ್ಮಿಕವಾಗಿ ಇಂಜಿನ್ ಅನ್ನು ಹಿಮ್ಮುಖಗೊಳಿಸಿದ್ದಾನೆ ಇದರ ಪರಿಣಾಮವಾಗಿ ಅಮರ್ ಅವಘಡಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಯಾಣಿಕರು ಈ ಬಗ್ಗೆ ಹೇಳುತ್ತಿದ್ದಂತೆ ಚಾಲಕ ರೈಲು ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ವೀಡಿಯೊದಲ್ಲಿ ಅಮರ್ ಬರೌನಿ ಜಂಕ್ಷನ್ ಪ್ಲಾಟ್ಫಾರ್ಮ್ ನಂ 5ರಲ್ಲಿ ನಿಂತಿದ್ದಾಗ ರೈಲಿನ ಇಂಜಿನ್ ಮತ್ತು ಪವರ್ ಕಾರ್ ನಡುವೆ ಸಿಕ್ಕಿಹಾಕಿಕೊಂಡಿರುವುದನ್ನು ತೋರಿಸಿದೆ. ಘಟನೆಯ ಬೆನ್ನಲ್ಲೇ ಸೋನ್ಪುರ್ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಇದು ಅತ್ಯಂತ ದುರದೃಷ್ಟಕರ ಘಟನೆಯಾಗಿದ್ದು, ಇದು ಸಂಭವಿಸಬಾರದಿತ್ತು. ನಾವು ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ. ನಾವು ಸಂತ್ರಸ್ತರ ಕುಟುಂಬಕ್ಕೆ ಪರಿಹಾರವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.