ಬಿಜೆಪಿ-ಬಿಜೆಡಿ ಮೈತ್ರಿ: ಗರಿಗೆದರಿದ ವದಂತಿ

Update: 2024-02-04 04:41 GMT

Photo: twitter.com/msnindia

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಶನಿವಾರ ಒಡಿಶಾಗೆ ಭೇಟಿ ನೀಡಿದ ಬೆನ್ನಲ್ಲೇ ರಾಜ್ಯದಲ್ಲಿ ಆಡಳಿತಾರೂಢ ಬಿಜೆಡಿ ಹಾಗೂ ಎನ್ ಡಿಎ ನಡುವೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಏರ್ಪಡಲಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಜೊತೆಗೆ ಸಂಬಲ್ ಪುರ ಐಐಎಂನಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಹಾಗೂ ಒಡಿಶಾ ಸಿಎಂ ಆತ್ಮೀಯತೆಯನ್ನು ಪ್ರದರ್ಶಿಸಿರುವುದು ಇದಕ್ಕೆ ಮತ್ತಷ್ಟು ಪುಷ್ಟಿ ಒದಗಿಸಿದೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣ ಆರಂಭದ ವೇಳೆ "ಒಡಿಶಾ ರಾಜ್ಯಪಾಲರಾದ ರಘುಬರ ದಾಸ್ ಜೀ, ಸಿಎಂ ಮತ್ತು ನನ್ನ ಮಿತ್ರ ಶ್ರೀಮಾನ್ ನವೀನ್ ಪಟ್ನಾಯಕ್ ಜೀ" ಎಂದು ಸಂಬೋಧಿಸಿದರು. ರಾಜ್ಯದಲ್ಲಿ 68 ಸಾವಿರ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದ ಮೋದಿಯವರು, ಇದು ಒಡಿಶಾದ ಅಭಿವೃದ್ಧಿ ಪಥದಲ್ಲಿ ಐತಿಹಾಸಿಕ ದಿನ ಎಂದರು.

ಇದಕ್ಕೆ ಪ್ರತಿಕ್ರಿಯಿಸಿ ತಮ್ಮ ಭಾಷಣದಲ್ಲಿ ಮೋದಿಯವರ ಗುಣಗಾನ ಮಾಡಿದ ನವೀನ್ ಪಟ್ನಾಯಕ್, ಭಾರತದ ಆರ್ಥಿಕ ಪ್ರಗತಿಗಾಗಿ ಗೌರವಾನ್ವಿತ ಪ್ರಧಾನಿಯವರು ದೇಶಕ್ಕೆ ಹೊಸ ದಿಕ್ಕು ತೋರಿಸಿದ್ದಾರೆ. ಆರ್ಥಿಕ ಶಕ್ತಿ ಕೇಂದ್ರವಾಗುವ ಪಥದಲ್ಲಿ ನಾವಿದ್ದೇವೆ" ಎಂದು ಹೇಳಿದರು.

ಬಳಿಕ ಸಂಬಲ್ ಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲೂ ಪ್ರಧಾನಿಯವರು ನವೀನ್ ಪಟ್ನಾಯಕ್ ಅಥವಾ ಬಿಜೆಡಿ ಮೇಲೆ ಎಲ್ಲೂ ವಾಗ್ದಾಳಿ ನಡೆಸದೇ, ಕಳೆದ ಒಂದು ದಶಕದಲ್ಲಿ ಒಡಿಶಾದಲ್ಲಿ ಸಮಾಜದ ವಿವಿಧ ವರ್ಗಗಳಿಗೆ ಕೇಂದ್ರದ ಯೋಜನೆಗಳು ನೀಡಿದ ಫಲ ಮತ್ತು ಸಾಧನೆಯನ್ನಷ್ಟೇ ಬಿಂಬಿಸಿದರು.

ರಾಜ್ಯ ಬಿಜೆಪಿ ನಾಯಕರು ಪಟ್ನಾಯಕ್ ವಿರುದ್ಧ ಆಕ್ರಮಣಕಾರಿ ನಿಲುವು ಹೊಂದಿದ್ದರೂ, ಕೇಂದ್ರದ ಬಿಜೆಪಿ ನಾಯಕತ್ವ ಮಾತ್ರ ಮೆದು ನಿಲುವು ತಾಳಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News