ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ದ್ವೇಷ ಭಾಷಣಕ್ಕೆ ಕಡಿವಾಣ ಹಾಕುವಂತೆ ಯುವಾತ್ಮಲ್, ರಾಯಪುರ ಜಿಲ್ಲೆಗಳ ಡಿಎಂ, ಎಸ್ಪಿಗೆ ಸುಪ್ರೀಂ ನಿರ್ದೇಶನ
ಹೊಸದಿಲ್ಲಿ: ಮುಂದಿನ ಒಂದು ವಾರ ಕಾಲ ನಡೆಸಲು ನಿರ್ಧರಿಸಲಾದ ಸಂಘ ಪರಿವಾರ ಹಾಗೂ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರ ರ್ಯಾಲಿಯ ಸಂದರ್ಭ ಯಾವುದೇ ದ್ವೇಷ ಭಾಷಣಕ್ಕೆ ಅವಕಾಶ ನೀಡದಂತೆ ಸುಪ್ರೀಂ ಕೋರ್ಟ್ ಬುಧವಾರ ಮಹಾರಾಷ್ಟ್ರದ ಯುವಾತ್ಮಲ್ ಹಾಗೂ ಚತ್ತೀಸ್ ಗಡದ ರಾಯಪುರ ಜಿಲ್ಲೆಗಳ ದಂಡಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರಿಗೆ ನಿರ್ದೇಶಿಸಿದೆ.
ನಿಗದಿಪಡಿಸಲಾಗಿರುವ ರ್ಯಾಲಿಗೆ ತಡೆ ನೀಡಲು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ಅವರನ್ನು ಒಳಗೊಂಡ ಪೀಠ ನಿರಾಕರಿಸಿದೆ. ಆದರೆ, ರ್ಯಾಲಿ ನಡೆಯುವ ಸ್ಥಳದಲ್ಲಿ ರೆಕಾರ್ಡಿಂಗ್ ಸೌಲಭ್ಯ ಇರುವ ಸಿಸಿಟಿವಿ ಕ್ಯಾಮೆರಾಗಳ ಅಳವಡಿಸುವಂತೆ ಸೂಚಿಸಿದೆ. ಇದರಿಂದ ಏನಾದರೂ ಸಂಭವಿಸಿದರೆ ದ್ವೇಷ ಭಾಷಣ ಮಾಡಿದವರನ್ನು ಪತ್ತೆ ಹಚ್ಚಬಹುದು ಎಂದು ಎರಡೂ ಜಿಲ್ಲೆಗಳ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕರಿಗೆ ಪೀಠ ಸೂಚಿಸಿದೆ.
ದ್ವೇಷ ಭಾಷಣದ ಹಲವಾರು ನಿದರ್ಶನಗಳು ವರದಿಯಾಗಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಬಾಕಿ ಇದೆ ಎಂದು ಶಹೀನ್ ಅಬ್ದುಲ್ಲಾ ಅವರು ಸಲ್ಲಿಸಿದ ಅರ್ಜಿಯ ಕುರಿತಂತೆ ಪೀಠ ಈ ಆದೇಶ ನೀಡಿದೆ.