ಲೋಕಸಭೆಗೆ ಬಿಜೆಪಿ ಭರ್ಜರಿ ತಯಾರಿ ; ಚುನಾವಣೆ ಘೋಷಣೆಗೂ ಮುನ್ನ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಸಿದ್ಧತೆ?

Update: 2024-02-24 18:21 GMT

Photo: ndtv.com

ಹೊಸದಿಲ್ಲಿ : ಮುಂಬರುವ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮುಂಚಿತವಾಗಿ ಬಿಜೆಪಿಯು 100 ಅಭ್ಯರ್ಥಿಗಳ ಪಟ್ಟಿಯನ್ನು ಮುಂದಿನ ಗುರುವಾರ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು NDTV ವರದಿ ಮಾಡಿದೆ.

ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಇಬ್ಬರ ಹೆಸರಿರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಫೆ.29ರಂದು ಸಭೆ ಸೇರುವ ಸಾಧ್ಯತೆಯಿದ್ದು, ಬಳಿಕ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.

ಕಳೆದ ಚುನಾವಣೆಯಲ್ಲಿ ಪ್ರಧಾನಿ ನರೆಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧಿಸಿ ಎರಡು ಬಾರಿ ಸಂಸದರಾಗಿದ್ದಾರೆ. ಅಮಿತ್ ಶಾ ಅವರು 2019 ರ ಚುನಾವಣೆಯಲ್ಲಿ ಗುಜರಾತ್‌ನ ಗಾಂಧಿನಗರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅದಕ್ಕೂ ಮುಂಚೆ ಅಡ್ವಾಣಿಯವರು ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ, 370 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಪಕ್ಷದ ಗುರಿಯನ್ನು ಈಡೇರಿಸಲು ಶ್ರದ್ಧೆಯಿಂದ ಕೆಲಸ ಮಾಡಲು ಬಿಜೆಪಿ ನಾಯಕರು, ಕಾರ್ಯಕರ್ತರಿಗೆ ಕರೆ ನೀಡಿದ್ದರು. ಅಲ್ಲದೆ ನಮಗೆ ಮುಂದಿನ 100 ದಿನಗಳು ನಿರ್ಣಾಯಕವಾದವು ಎಂದು ಹೇಳಿದ್ದರು.

“ ನಾವೆಲ್ಲರೂ ಹೊಸ ಮತದಾರರನ್ನು, ಪ್ರತಿಯೊಬ್ಬ ಫಲಾನುಭವಿ ಹಾಗೂ ಪ್ರತಿ ಸಮುದಾಯವನ್ನು ಮುಂದಿನ 100 ದಿನಗಳಲ್ಲಿ ತಲುಪಬೇಕು. ನಾವು ಎಲ್ಲರ ವಿಶ್ವಾಸ ಗೆಲ್ಲಬೇಕು. NDA ಮೈತ್ರಿಕೂಟದ ಸ್ಥಾನವನ್ನು 400ಕ್ಕೆ ಕೊಂಡೊಯ್ಯಲು ಹಾಗೂ ಬಿಜೆಪಿ 370 ಕ್ಷೇತ್ರಗಳನ್ನು ಗೆಲ್ಲಲು ಶ್ರಮಿಸಬೇಕು” ಎಂದು ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಪ್ರಧಾನಿ ಮೋದಿ ಕರೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News