ತೆಲಂಗಾಣ ಚುನಾವಣೆಗೂ ಮುನ್ನ ಶಾಸಕ ರಾಜಾ ಸಿಂಗ್ ಅಮಾನತನ್ನು ಹಿಂಪಡೆದ ಬಿಜೆಪಿ
ಹೈದರಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ ತೆಲಂಗಾಣ ವಿಧಾನಸಭಾ ಚುನಾವಣೆಗೂ ಮುನ್ನ ಶಾಸಕ ಟಿ.ರಾಜಾ ಸಿಂಗ್ ಅವರ ಅಮಾನತನ್ನು ಹಿಂಪಡೆದಿರುವ ಬಿಜೆಪಿಯು, ಗೋಶಮಹಲ್ ವಿಧಾನಸಭಾ ಕ್ಷೇತ್ರದಿಂದ ಅವರು ಮತ್ತೆ ಅಭ್ಯರ್ಥಿಯಾಗುವ ಅವಕಾಶವನ್ನು ಸುಗಮಗೊಳಿಸಿದೆ.
ಆಗಸ್ಟ್ 2022ರಲ್ಲಿ ಕಾಮಿಡಿಯನ್ ಮುನವ್ವರ್ ಫಾರೂಕಿ ಅವರಿಗೆ ಹೈದರಾಬಾದ್ ನಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಿದ್ದ ಭಾರತ್ ರಾಷ್ಟ್ರ ಸಮಿತಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ರಾಜಾ ಸಿಂಗ್ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದುದರಿಂದ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
ಬಿಜೆಪಿ ಪಕ್ಷವು ರಾಜಾ ಸಿಂಗ್ ಅವರನ್ನು ಅಮಾನತುಗೊಳಿಸಿದ ಬಳಿಕ ಬಂಧನಕ್ಕೊಳಗಾಗಿದ್ದ ಅವರು ಮೂರು ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದರು.
ಲೋಧಾ ಸಮುದಾಯದ ಬಾಹುಳ್ಯವಿರುವ ಹಳೆಯ ಹೈದರಾಬಾದ್ ನಗರದ ಗೋಶಾಮಹಲ್ ವಿಧಾನ ಸಭಾ ಕ್ಷೇತ್ರದವರಾದ ಟಿ.ರಾಜಾ ಸಿಂಗ್, 2014 ಹಾಗೂ 2018ರಲ್ಲಿ ಆ ಕ್ಷೇತ್ರದಿಂದಲೇ ಸತತವಾಗಿ ಗೆಲುವು ಸಾಧಿಸಿ ಶಾಸಕರಾಗಿದ್ದರು.