ಮಹಿಳಾ ಗಿಗ್ ಕಾರ್ಮಿಕರ ಪಾಲಿಗೆ ‘ಕಪ್ಪು ದೀಪಾವಳಿ’: ಮೂಲಭೂತ ಹಕ್ಕುಗಳಿಗಾಗಿ ಆಗ್ರಹ
ಹೊಸದಿಲ್ಲಿ: ಬೆಳಕಿನ ಹಬ್ಬ ದೀಪಾವಳಿ ಅನೇಕರಿಗೆ ಸಂತೋಷ ಮತ್ತು ಸಂಭ್ರಮಾಚರಣೆಯ ಸಮಯ,ಆದರೆ ಎಲ್ಲರಿಗೂ ಅಲ್ಲ. 11 ಪ್ರಮುಖ ನಗರಗಳಲ್ಲಿ ಹಲವಾರು ಮಹಿಳಾ ಗಿಗ್ ಕಾರ್ಮಿಕರು (Zomato,amazon ನಂತಹ ಕಂಪೆನಿ ಡೆಲಿವರ್ ಉದ್ಯೋಗಿಗಳು) ಮುಷ್ಕರ ನಡೆಸುವುದರೊಂದಿಗೆ ಗುರುವಾರವು ‘ಕಪ್ಪು ದೀಪಾವಳಿ’ಗೆ ಸಾಕ್ಷಿಯಾಯಿತು.
ಮಹಿಳಾ ನೇತೃತ್ವದ ಗಿಗ್ ಕೆಲಸಗಾರರ ರಾಷ್ಟ್ರೀಯ ಕಾರ್ಮಿಕ ಒಕ್ಕೂಟವಾಗಿರುವ ʼದಿ ಗಿಗ್ ಆ್ಯಂಡ್ ಪ್ಲ್ಯಾಟ್‌ಫಾರ್ಮ್ ಸರ್ವಿಸಸ್ ವರ್ಕರ್ಸ್ ಯೂನಿಯನ್ (ಜಿಐಪಿಎಸ್‌ಡಬ್ಲ್ಯುಯು) ಗುರುವಾರ ಡಿಜಿಟಲ್ ಮುಷ್ಕರವನ್ನು ನಡೆಸಿತ್ತು. ಹೆಚ್ಚಿನ ಮಹಿಳಾ ಕಾರ್ಮಿಕರು ಸರಕಾರಿ ರಜಾದಿನಗಳಲ್ಲಿಯೂ ತಮ್ಮಿಂದ ಕೆಲಸವನ್ನು ನಿರೀಕ್ಷಿಸುವ ಶೋಷಕ ಪ್ಲ್ಯಾಟ್‌ಫಾರ್ಮ್ ಕಂಪನಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ತಮ್ಮ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡುವ ಮೂಲಕ ಕೆಲಸದಿಂದ ದೂರವಿದ್ದರು.
ಈ ಮುಷ್ಕರವು ಶೋಷಕ ಕಂಪನಿಗಳು ಮತ್ತು ಭಾರತ ಸರಕಾರವು ನಿರಾಕರಿಸಿರುವ ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಲು ದೇಶಾದ್ಯಂತದ ವಿವಿಧ ಗಿಗ್ ಕಾರ್ಮಿಕರನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ ಎಂದು ಜಿಐಪಿಎಸ್‌ಡಬ್ಲ್ಯುಯು ಹೇಳಿಕೆಯಲ್ಲಿ ತಿಳಿಸಿದೆ.
ಅಸುರಕ್ಷಿತ ಕೆಲಸದ ವಾತಾವರಣವು ಮಹಿಳಾ ಗಿಗ್ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳಲ್ಲೊಂದಾಗಿರುವ ಸಮಯದಲ್ಲಿ ಈ ಪ್ರತಿಭಟನೆ ನಡೆದಿದೆ. ನಿರೀಕ್ಷಿತ ಕನಿಷ್ಠ ವೇತನಕ್ಕಿಂತ ಕಡಿಮೆ ಹಣಕ್ಕಾಗಿ ಹೆಚ್ಚಿನ ಗಂಟೆಗಳ ದುಡಿಮೆ ಸೇರಿದಂತೆ ಪ್ಲ್ಯಾಟ್‌ಫಾರ್ಮ್ ಕಂಪನಿಗಳಿಂದ ಶೋಷಣೆಗಳನ್ನು ಈ ಮಹಿಳಾ ಗಿಗ್ ಕಾರ್ಮಿಕರು ಬೆಟ್ಟುಮಾಡಿದ್ದಾರೆ.
ಕನಿಷ್ಠ ಜೀವನ ವೇತನ,ಮಹಿಳೆಯರಿಗೆ ನಿರ್ದಿಷ್ಟವಾದ ಹೆರಿಗೆ ಪ್ರಯೋಜನಗಳು ಮತ್ತು ಮುಟ್ಟಿನ ರಜೆಗಳಂತಹ ಆರೋಗ್ಯ ಮತ್ತು ಸುರಕ್ಷತೆಯಂತಹ ಮೂಲಭೂತ ಕಾರ್ಮಿಕ ಹಕ್ಕುಗಳಿಗಾಗಿ ನಾವು ಆಗ್ರಹಿಸುತ್ತಿದ್ದೇವೆ ಎಂದು ಜಿಐಪಿಎಸ್‌ಡಬ್ಲ್ಯುಯು ಪ್ರಧಾನ ಕಾರ್ಯದರ್ಶಿ ಸೀಮಾ ಸಿಂಗ್ ಹೇಳಿದ್ದಾರೆ.