ಸರೋವರದಲ್ಲಿ ಎರಡು ಗಂಟೆ ಸಿಲುಕಿಕೊಂಡ ಸಂಬಿತ್ ಪಾತ್ರ, ಕೇಂದ್ರ ಸಚಿವ ಪರ್ಷೋತ್ತಮ್ ರುಪಾಲಾ!
ಭುವನೇಶ್ವರ: ಕೇಂದ್ರ ಸಚಿವ ಪರ್ಷೋತ್ತಮ್ ರುಪಾಲಾ ಅವರನ್ನು ಕರೆದೊಯ್ಯುತ್ತಿದ್ದ ದೋಣಿಯು ಒಡಿಶಾದ ಚಿಲಿಕಾ ಸರೋವರದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಿಲುಕಿಕೊಂಡ ಘಟನೆಯು ರವಿವಾರ ಸಂಜೆ ನಡೆದಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೊದಲಿಗೆ ದೋಣಿಯು ಮೀನುಗಾರರು ಹಾಕಿರುವ ಬಲೆಗೆ ಸಿಲುಕಿಕೊಂಡಿರಬಹುದು ಎಂದು ಶಂಕಿಸಲಾಗಿತ್ತಾದರೂ, ನಂತರ ತಾವು ನೀಲಿ ಸರೋವರದಲ್ಲಿ ದಾರಿ ತಪ್ಪಿದೆವು ಎಂದು ತಿಳಿಯಿತು ಕೇಂದ್ರ ಸಚಿವ ಪರ್ಷೋತ್ತಮ್ ರುಪಾಲಾ ಸ್ಪಷ್ಟಪಡಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೆ ಮತ್ತೊಂದು ದೋಣಿಯನ್ನು ಕಳಿಸಿದ ಜಿಲ್ಲಾಡಳಿತವು, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಹಾಗೂ ಹೈನುಗಾರಿಕೆ ಸಚಿವ ಪರ್ಷೋತ್ತಮ್ ರುಪಾಲಾ ಅವರನ್ನು ಅವರು ತಲುಪಬೇಕಿದ್ದ ಸ್ಥಳಕ್ಕೆ ಸಾಗಿಸಿತು. ಕೇಂದ್ರ ಸಚಿವರೊಂದಿಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಹಾಗೂ ಕೆಲವು ಸ್ಥಳೀಯ ಬಿಜೆಪಿ ನಾಯಕರೂ ನಿಂತು ಹೋಗಿದ್ದ ದೋಣಿಯಲ್ಲಿದ್ದರು.
ಈ ಘಟನೆಯು ಸಚಿವರು ಬಾರ್ಕುಲ್ ನಿಂದ ಖುರ್ದಾ ಜಿಲ್ಲೆಗೆ ಮತ್ತು ಅಲ್ಲಿಂದ ಪುರಿ ಜಿಲ್ಲೆಯ ಸತಪದಗೆ ಸರೋವರದ ಮೂಲಕ ತೆರಳುವಾಗ ನಡೆದಿದೆ.
ಸರೋವರದ ಮಧ್ಯೆ, ನಲಬನ ಪಕ್ಷಿ ಧಾಮದ ಬಳಿ ಮೋಟಾರು ಚಾಲಿತ ದೋಣಿಯು ಎರಡು ಗಂಟೆಗಳ ಕಾಲ ಸಿಲುಕಿಕೊಂಡಿತು ಎಂದು ಸಚಿವರ ಬೆಂಗಾವಲು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ತುಂಬಾ ಕತ್ತಲೆಯಾಗಿತ್ತು ಹಾಗೂ ದೋಣಿಯನ್ನು ಚಲಾಯಿಸುತ್ತಿದ್ದ ವ್ಯಕ್ತಿಯು ಆ ಮಾರ್ಗಕ್ಕೆ ಹೊಸಬನಾಗಿದ್ದರಿಂದ ನಾವು ದಾರಿ ತಪ್ಪಿದೆವು. ಇದರಿಂದಾಗಿ ನಾವು ಸತಪದ ತಲುಪಲು ಎರಡು ಗಂಟೆ ಹೆಚ್ಚು ಅವಧಿ ತಗುಲಿತು” ಎಂದು ನಂತರ ಸಚಿವರು ವರದಿಗಾರರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೆ ಸತಪದದಿಂದ ಮತ್ತೊಂದು ದೋಣಿಯನ್ನು ರವಾನಿಸಿದ ಜಿಲ್ಲಾಡಳಿತವು, ಸಚಿವರು ಹಾಗೂ ಅವರ ಸಹಚರರನ್ನು ಅವರು ತಲುಪಬೇಕಿದ್ದ ಸ್ಥಳಕ್ಕೆ ರವಾನಿಸಿತು ಎಂದು ವರದಿಯಾಗಿದೆ.