ಮುಂಬೈ ವಿಮಾನ ನಿಲ್ದಾಣ ಸ್ಫೋಟ ಬೆದರಿಕೆ ; ಕೇರಳದಿಂದ ಆರೋಪಿಯ ಬಂಧನ
ಮುಂಬೈ: ನಗರದ ಛತ್ರಪತಿ ಶಿವಾಜಿ ಮಹಾರಾಜ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಒಡ್ಡಿದ ಆರೋಪದಲ್ಲಿ ಮಹಾರಾಷ್ಟ್ರದ ಭಯೋತ್ಪಾದನ ನಿಗ್ರಹ ದಳ (ಎಟಿಎಸ್) ಕೇರಳದ ನಿವಾಸಿಯೋರ್ವನನ್ನು ಶುಕ್ರವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಮುಂಬೈ ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ ಗುರುವಾರ ಪೂರ್ವಾಹ್ನ 11.06ಕ್ಕೆ ಬೆದರಿಕೆಯ ಈ ಮೇಲ್ ಸ್ವೀಕರಿಸಿದ ಬಳಿಕ ಎಟಿಎಸ್ ತನಿಖೆ ಆರಂಭಿಸಿತ್ತು.
‘‘ಇದು ನಿಮ್ಮ ವಿಮಾನ ನಿಲ್ದಾಣಕ್ಕೆ ಕೊನೆಯ ಎಚ್ಚರಿಕೆ. ಮುಂದಿನ 48 ಗಂಟೆಗಳಲ್ಲಿ ಬಿಟ್ ಕಾಯಿನ್ ನಲ್ಲಿ ಒಂದು ಮಿಲಿಯನ್ ಡಾಲರ್ ನೀಡದಿದ್ದರೆ, ನಾವು ಟರ್ಮಿನಲ್ 2ನ್ನು ಸ್ಫೋಟಿಸುತ್ತೇವೆ. ಇನ್ನೊಂದು ಎಚ್ಚರಿಕೆಯನ್ನು 24 ಗಂಟೆಗಳ ಬಳಿಕ ನೀಡಲಾಗುವುದು’’ ಎಂದು ಇಮೇಲ್ನಲ್ಲಿ ಹೇಳಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೆದರಿಕೆ ಹಿನ್ನೆಲೆಯಲ್ಲಿ ಶಹಾರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಪರ್ಯಾಯವಾಗಿ ತನಿಖೆ ಆರಂಭಿಸಿದ ಎಟಿಎಸ್ ನ ಸೈಬರ್ ಸೆಲ್ ಇಮೇಲ್ ಅನ್ನು ಕೇರಳದಿಂದ ಕಳುಹಿಸಿರುವುದನ್ನು ಐಪಿ ವಿಳಾಸದ ಮೂಲಕ ಪತ್ತೆ ಹಚ್ಚಿತ್ತು. ಕೂಡಲೇ ಕಾರ್ಯಪ್ರವೃತ್ತವಾದ ಎಟಿಎಸ್ ಕೇರಳಕ್ಕೆ ತೆರಳಿತು ಹಾಗೂ ಆರೋಪಿಯನ್ನು ಬಂಧಿಸಿತು.
ಆದರೆ, ಎಟಿಎಸ್ ಆರೋಪಿಯ ಗುರುತು ಬಹಿರಂಗಪಡಿಸಿಲ್ಲ.
ಗುರುವಾರ ಬೆಳಿಗ್ಗೆ ಇ-ಮೇಲ್ ಬಂದಿದ್ದು, ಸ್ಫೋಟ ತಡೆಯಬೇಕಿದ್ದರೆ ಮುಂದಿನ 48 ಗಂಟೆಗಳಲ್ಲಿ ಬಿಟ್ಕಾಯಿನ್ ನಲ್ಲಿ ಒಂದು ಮಿಲಿಯನ್ ಡಾಲರ್ ನೀಡುವಂತೆ ಆರೋಪಿ ಬೇಡಿಕೆಯಿಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.